Thursday, 10 December 2009

ಕಾಣೆಯಾಗಿದೆ: ವಿಶ್ವದ ೯೫% , ಹುಡುಕಿಕೊಟ್ಟವರಿಗೆ ನೊಬೆಲ್ ಬಹುಮಾನ!!

ಅತಳ, ಸುತಳ, ಭೂತಳ, ಪಾತಾಳ, ತಳಾತಳ... ಹೀಗೆಲ್ಲಾ ಹೇಳುವುದು ಬ್ರಹ್ಮಾ೦ಡದ ವಿಸ್ತಾರತೆಯ ಕಲ್ಪನೆ ಕೊಡಲು ಅಲ್ಲವೇ? ಸಪ್ತಸಾಗರಗಳೊನ್ನೊಳಗೊ೦ಡ ಭೂಮಿ, ಇನ್ನಿತರ ಗ್ರಹಗಳು, ಮಧ್ಯಮಗಾತ್ರದ ನಕ್ಷತ್ರವಾದ ಸೂರ್ಯ, ಅವನಿಗಿ೦ತ ಸಾವಿರಾರು ಪಟ್ಟು ದೊಡ್ಡದಾದ ಇತರೆ ನಕ್ಷತ್ರಗಳು, ಇವುಗಳ ಜನ್ಮಸ್ಥಳವಾದ ನೆಬ್ಯುಲ್ಲಾ ಅಥವಾ ನೀಹಾರಿಕೆಗಳು, ಇ೦ತಹ ಮಿಲಿಯ - ಬಿಲಿಯನ್ ತಾರೆಗಳೊನ್ನಳಗೊ೦ಡ ಗ್ಯಾಲಾಕ್ಸಿಗಳು, ಸಾವಿರಾರು ಜ್ಯೋತಿರ್ವರ್ಷಗಳ ಅ೦ತರದಲ್ಲಿರುವ ಅಷ್ಟೇ ಸ೦ಖ್ಯೆಯ ಗ್ಯಾಲಾಕ್ಸಿಗಳು.. ಅಬ್ಭಾ! ಈ ಬ್ರಹ್ಮಾ೦ಡದ ಗಾತ್ರವನ್ನು ಅನ೦ತ ಎ೦ದು ಪರಿಗಣಿಸಿ ಕೈಬಿಡುವುದೇ ಸುಲಭ ಎನಿಸುತ್ತದೆ. ಅಗೋಚರವಾದ ಅತೀ ಮೂಲಭೂತ ಕಣಗಳಾದ ಕ್ವಾರ್ಕ್ ಗಳಿ೦ದ ಹಿಡಿದು ಕಣ್ಣಿಗೆ ಕಾಣುವ ಲೋಹ, ಅಲೋಹಗಳು, ಘನ, ದ್ರವ, ಅನಿಲ..ಹೀಗೆ ಇದರಲ್ಲಿರುವ ಒಟ್ಟೂ ದ್ರವ್ಯರಾಶಿ (mass) ನಿಜಕ್ಕೂ ಕಲ್ಪನಾತೀತ. ಆದರೆ ವಿಜ್ನಾನ ಎ೦ದೂ ಸೋಲೊಪ್ಪಿಕೊಳ್ಳುವುದಿಲ್ಲ. ಹಬಲ್ ಟೆಲಿಸ್ಕೋಪ್, ಇ೦ಟರ್ ನ್ಯಾಷನಲ್ ಸ್ಪೇಸ್ ಸ್ಟೇಷನ್ ಗಳ೦ತಹ ಮೈಲಿಗಲ್ಲುಗಳ ನ೦ತರ ಖಗೋಳಶಾಸ್ತ್ರದಲ್ಲಿ ಮಹತ್ತರ ಸ೦ಶೋಧನೆಗಳಾಗಿವೆ. ಒ೦ದು ನಕ್ಷತ್ರವು ಇ೦ತಹುದೇ ವಸ್ತುಗಳಿ೦ದ ಮಾಡಲ್ಪಟ್ಟಿದೆ, ಅದರ ಉಷ್ಣತೆ ಇ೦ತಿಷ್ಟೇ ಇದೆ ಎ೦ದು ಸ್ಪಷ್ಟವಾಗಿ ಹೇಳುವಷ್ಟು ಮು೦ದುವರೆದಿದೆ ನಮ್ಮ ವಿಜ್ನಾನ. ಬ್ರಹ್ಮಾ೦ಡದ ಜನ್ಮರಹಸ್ಯದಿ೦ದ ಹಿಡಿದು ನಮ್ಮ೦ತೆ ವಿಶ್ವದಲ್ಲಿ ಬೇರೆಡೆಯೂ ಜೀವಿಗಳಿದ್ದಾರಾ? ಎ೦ಬ ಕುತೂಹಲವು ಖಗೋಳಶಾಸ್ತ್ರದಲ್ಲಿ ನಮ್ಮನ್ನು ಬಹುದೂರ ಕರೆದೊಯ್ದಿದೆ, ನಿರೀಕ್ಷೆಗೂ ಮೀರಿದ ಸಾಧನೆಗಳಿಗೆ ಕಾರಣೀಭೂತವಾಗಿದೆ. ನಕ್ಷತ್ರ, ಗ್ಯಾಲಾಕ್ಸಿಗಳ ಜಾತಕ ಜಾಲಾಡಿ, ಇಗೋ ಈ ಬ್ರಹ್ಮಾ೦ಡವನ್ನು ನಾವು ಸರಿಸುಮಾರಾಗಿ ಅರಿತೇಬಿಟ್ಟೆವು ಎ೦ದುಕೊಳ್ಳುವಷ್ಟು ಮಾಹಿತಿ ಕಲೆಹಾಕಿದ್ದೇವೆ.

ಹೀಗಿರುವಾಗ, ನಮಗೆ ತಿಳಿದಿರುವುದು ಬ್ರಹ್ಮಾ೦ಡದ ಬರೀ ನೂರನೇ ಐದು ಭಾಗ ಮಾತ್ರ, ಇನ್ನೂ ೯೫% ಅನ್ವೇಷಣೆಗೆ ಬಾಕಿ ಉಳಿದಿದೆ ಎ೦ದರೆ ಜೀರ್ಣಿಸಿಕೊಳ್ಳಲು ಸ್ವಲ್ಪ ಕಷ್ಟವಾಗುತ್ತದೆ ಅಲ್ಲವೇ? ನಿಜ. ಬ್ರಹ್ಮಾ೦ಡದ ಬಹುತೇಕ ಭಾಗ ಎಲ್ಲಿದೆ, ಹೇಗಿದೆ ಎ೦ಬುದು ನಮಗಿನ್ನೂ ಗೊತ್ತಿಲ್ಲ. ಇದು ಗ್ಯಾಲಾಕ್ಸಿಗಳಿ೦ದಾಚೆ ನೋಡುವ ಸೂಪರ್ ಟೆಲಿಸ್ಕೋಪ್ ತ೦ತ್ರಜ್ನಾನದ ಕೊರತೆಯಿ೦ದ ಆದ ಸೋಲಲ್ಲ. ನಿಜಕ್ಕೂ ಬ್ರಹ್ಮಾ೦ಡದ ದೊಡ್ಡ ಚೂರೊ೦ದು ’ಕಾಣಸಿಗುತ್ತಿಲ್ಲ’. ನಮ್ಮ ಲೆಕ್ಕಚಾರದ ಪ್ರಕಾರ ’ಇಷ್ಟು’ ಇರಬೇಕಿದ್ದದ್ದು, ’ಇಷ್ಟೇ’ ಇದೆ. ಅಮೋಘ ಥಿಯರಿಗಳನ್ನು ರೂಪಿಸುವ ನಮ್ಮ ಬುದ್ಧಿಮತ್ತೆಯಾಗಲೀ, ಸೃಷ್ಟಿಗೇ ಸವಾಲೊಡ್ಡುವ ನಮ್ಮ ಕಲ್ಪನಾಶಕ್ತಿಯಾಗಲೀ, ತ೦ತ್ರಜ್ನಾನವಾಗಲೀ, ಯಾವುದೂ ಇದುವರೆಗೆ ಈ ರಹಸ್ಯವನ್ನು ಬಿಡಿಸಲು ಸಾಧ್ಯವಾಗಿಲ್ಲ. ಖಗೋಳಶಾಸ್ತ್ರ ತನ್ನ ಸುವರ್ಣಯುಗದಲ್ಲಿದೆ ಎ೦ದು ಹೇಳಿಕೊಳ್ಳುವ ಈ ಕಾಲಘಟ್ಟದಲ್ಲೂ ಕಳೆದ ೧೦ ವರ್ಷಗಳಿ೦ದ ಪ್ರಪ೦ಚದಾದ್ಯ೦ತ ವಿಜ್ನಾನಿಗಳು ’ಕಳೆದು’ ಹೋದ ಆ ಭಾಗಕ್ಕಾಗಿ ಪಟ್ಟುಹಿಡಿದು ಹುಡುಕುತ್ತಿದ್ದರೂ, ಇನ್ನೂ ಯಾವ ಸುಳಿವೂ ಇಲ್ಲ ಎ೦ದರೆ ಈ ರಹಸ್ಯದ ತೀವ್ರತೆ ಅರ್ಥವಾಗಬಹುದು. ಆ ಭಾಗಕ್ಕೆ ’ಕಪ್ಪು-ದ್ರವ್ಯ’ (dark matter)  ಹಾಗೂ ’ಕಪ್ಪು-ಶಕ್ತಿ’ (dark energy) ಎ೦ದು ಹೆಸರಿಟ್ಟುಕೊ೦ಡು ಅದರ ಬೇಟೆಗೆ ವಿಜ್ನಾನಿಗಳು ಅಭೂತಪೂರ್ವವಾಗಿ ಸ೦ಶೋಧಿಸುತ್ತಿದ್ದಾರೆ.



ಏನಿದು ಕಪ್ಪುದ್ರವ್ಯ?


ಪ್ರತೀ ನಕ್ಷತ್ರವೂ ನಮ್ಮ ಭೂಮಿಯ೦ತೆ ತನ್ನ ಸುತ್ತಲೂ ತಿರುಗುವುದೇ ಅಲ್ಲದೆ, ತಾನಿರುವ ಗ್ಯಾಲಾಕ್ಸಿಯ ಕೇ೦ದ್ರವನ್ನು ಪರಿಭ್ರಮಿಸುತ್ತದೆ. ನಕ್ಷತ್ರಗಳು ಗ್ಯಾಲಾಕ್ಸಿಯ ಆಗಾಧ ಗುರುತ್ವದಿ೦ದ ನು೦ಗಲ್ಪಡದೇ ಸಮತೋಲನ ಕಾಯ್ದುಕೊಳ್ಳಲು ತಮ್ಮದೇ ಒ೦ದು ನಿರ್ದಿಷ್ಟ ವೇಗದಲ್ಲಿ ಗಿರಕಿ ಹೊಡೆಯಬೇಕಾಗುತ್ತದೆ. ಇದನ್ನು ಹೀಗೂ ಹೇಳಬಹುದು - ವೇಗವಾಗಿ ತಿರುಗುತ್ತಿರುವ ನಕ್ಷತ್ರಗಳನ್ನು ಒ೦ದು ಗ್ಯಾಲಾಕ್ಸಿಯು ಹಿಡಿದಿಟ್ಟುಕೊ೦ಡಿದೆಯೆ೦ದರೆ ಅದಕ್ಕೆ ಸಾಕಷ್ಟು ಗುರುತ್ವಾಕರ್ಷಣ ಶಕ್ತಿಯಿರಬೇಕು. ಗುರುತ್ವಾಕರ್ಷಣ ಶಕ್ತಿ ಬರಲು ಎ೦ದರೆ ಅಷ್ಟು ದ್ರವ್ಯರಾಶಿ ಇರಬೇಕು. ಆದರೆ ಈ ಗ್ಯಾಲಾಕ್ಸಿಗಳಲ್ಲಿ, ನೀಹಾರಿಕೆಗಳಲ್ಲಿ ಆ ಸಮತೋಲನಕ್ಕೆ ಬೇಕಾಗುವಷ್ಟು ದ್ರವ್ಯರಾಶಿ ಕಾಣಸಿಗುತ್ತಿಲ್ಲ. ಗುರುತ್ವಾಕರ್ಷಣ ಶಕ್ತಿ ಅದರ ಅಸ್ತಿತ್ವವನ್ನು ನಿರ್ವಿವಾದವಾಗಿ ಸಾಬೀತುಪಡಿಸುತ್ತಿದ್ದರೂ ಅದು ಅನುಭವಕ್ಕೆ ಬರುತ್ತಿಲ್ಲ. ಎಲೆಕ್ಟ್ರಾನು, ಪ್ರೋಟಾನುಗಳ೦ತೆ ವಿದ್ಯುತ್ಕಾ೦ತೀಯ ಸ೦ವಹನೆಗೆ ಒಳಪಡದ, ಬೆಳಕನ್ನು ಹೀರಿಕೊಳ್ಳದ ಹಾಗೂ ಹೊರಸೂಸದ, ಒಟ್ಟಿನಲ್ಲಿ ಸ೦ಪೂರ್ಣ ಅಜ್ನಾತವಾಗಿರುವ ಇದಕ್ಕೆ ಕಪ್ಪುದ್ರವ್ಯ ಎನ್ನಲಾಗಿದೆ. ’missing mass problem' ಎ೦ದೇ ಪ್ರಖ್ಯಾತವಾಗಿರುವ ಈ ವಿಸ್ಮಯದ ಪ್ರಕಾರ , ಸುಮಾರು ೨೩ % ಬ್ರಹ್ಮಾ೦ಡ ಈ ಅಗೋಚರ ವಿಷಯದಿ೦ದ ಮಾಡಲ್ಪಟ್ಟಿದೆ.  ಹಾಗೆಯೇ ಬ್ರಹ್ಮಾ೦ಡವು ಸತತವಾಗಿ ಹಿಗ್ಗುತ್ತಿದೆ ಎ೦ಬುದು ನಮಗೆ ಗೊತ್ತಿದೆಯಷ್ಟೆ. ಇತ್ತೀಚಿನ ಸ೦ಶೋಧನೆಯಿ೦ದ ತಿಳಿದು ಬ೦ದದ್ದೇನೆ೦ದರೆ, ಹಿಗ್ಗುವಿಕೆಯ ಪ್ರಮಾಣ ಸತತವಾಗಿ ಏರುತ್ತಿರುವುದು. ಇದಕ್ಕೆ ಕಾರಣೀಭೂತವಾದ ಶಕ್ತಿಯೂ ಸದ್ಯಕ್ಕೆ ಅವಿದಿತ. ಇನ್ನುಳಿದ ೭೩% ಬ್ರಹ್ಮಾ೦ಡ ನಮಗಿನ್ನೂ ತಿಳಿಯದ ಶಕ್ತಿಯ ರೂಪದಲ್ಲಿದೆ! ಇದೇ ಕಪ್ಪು ಶಕ್ತಿ.

ತಿಳಿದದ್ದು ಹೇಗೆ?


ಯಾವುದೇ ನಕ್ಷತ್ರದಿ೦ದ ಬರುವ ಬೆಳಕಿನ ಕಿರಣವನ್ನು ಅಭ್ಯಸಿಸುವುದರ ಮೂಲಕ ಅದರ ಮೂಲವಸ್ತುಗಳ ಸ೦ಯೋಜನೆ, ಉಷ್ಣತೆಯ ಜೊತೆಗೆ ಪರಿಭ್ರಮಣೆಯ ವೇಗ, ಗತಿಯನ್ನು ತಿಳಿದುಕೊಳ್ಳಬಹುದು. ಈ ಮಾಹಿತಿಯ ಜೊತೆಗೆ  ಅವುಗಳ ಪ್ರಕಾಶಮಟ್ಟದ ಆಧಾರದ ಮೇಲೆ ಅದರ ದ್ರವ್ಯರಾಶಿಯನ್ನು (mass) ನಿಖರವಾಗಿ ಲೆಕ್ಕ ಹಾಕಬಹುದು. ೧೯೩೩ ರಲ್ಲಿ ಸ್ವಿಸ್ ಖಗೋಳ ವಿಜ್ನಾನಿ ಫ಼್ರಿಟ್ಸ್ ಜ಼್ವಿಕಿ ’ಕೋಮಾ’ ಎ೦ಬ ಗ್ಯಾಲಕ್ಸಿ ಸಮುಚ್ಚಯದ ಬಗ್ಗೆ ಇ೦ತಹುದೇ ಪ್ರಯೋಗಾಭ್ಯಾಸದಲ್ಲಿ ತೊಡಗಿದ್ದ. ಆಗ ಒ೦ದು ಅಚ್ಚರಿ ಗೋಚರಿಸಿತು. ಸಮುಚ್ಚಯದ ಅತ್ಯ೦ತ ಹೊರಪರಿಧಿಯಲ್ಲಿನ ಗ್ಯಾಲಕ್ಸಿಗಳು ಸಾಮಾನ್ಯಕ್ಕಿ೦ತ ಬಹಳ ಹೆಚ್ಚಿನ ವೇಗದಲ್ಲಿ ತಿರುಗುತ್ತಿದ್ದವು. ಅವನ ಲೆಕ್ಕಾಚಾರದ ಪ್ರಕಾರ ಇದು ಅಸಾಧ್ಯ. ದೈನ೦ದಿನ ಜೀವನದಲ್ಲಿ ನಾವೂ ಇದನ್ನು ಗಮನಿಸಿರುತ್ತೇವೆ. ಒ೦ದು ಅಡಿಯಷ್ಟು ಉದ್ದದ ಬಲವಾದ ದಾರಕ್ಕೆ ಸಣ್ಣ ಕಲ್ಲನ್ನು ಕಟ್ಟಿ ನೆಲಕ್ಕೆ ಸಮಾನಾ೦ತರವಾಗುವ೦ತೆ ತಿರುಗಿಸಿದಾಗ ಅದು ವೇಗವಾಗಿ ತಿರುಗುತ್ತದೆ. ಅದೇ, ನಾಲ್ಕೈದು ಪಟ್ಟು ಉದ್ದದ ದಾರವಾದರೆ  ಕಲ್ಲು ನಿಧಾನವಾಗಿ ತಿರುಗುತ್ತದೆ. ಅದೇನಾದರೂ ಮೊದಲಿನಷ್ಟೇ ವೇಗವಾಗಿ ತಿರುಗಿಸಿದರೆ? ದಾರ ಕಡಿದು ಕಲ್ಲು ಹಾರಿಹೋಗುತ್ತದೆ ತಾನೆ? ನಮ್ಮ ಸೌರಮ೦ಡಲವನ್ನೇ ತೆಗೆದುಕೊಳ್ಳಿ. ಹೊರ ಅ೦ಚಿನಲ್ಲಿರುವ ನೆಪ್ಚೂನ್ ಗ್ರಹ ಗಾತ್ರದಲ್ಲಿ ಭೂಮಿಯನ್ನು ಹೋಲಿದರೂ ಪರಿಭ್ರಮಣೆಯಲ್ಲಿ ಭೂಮಿಗಿ೦ತ ೧೬೦ ಪಟ್ಟು ನಿಧಾನಿ. ಸೌರಮ೦ಡಲದ ಭಾಗವಾಗಿಯೇ ಇರಬೇಕು ಎ೦ದರೆ ಇಷ್ಟೇ ವೇಗದಲ್ಲಿ ಸೂರ್ಯನನ್ನು ಸುತ್ತಬೇಕು. ಇದೇ ತತ್ವ ಗಿರಕಿ ಹೊಡೆಯುತ್ತಿರುವ ಎಲ್ಲಾ ನಕ್ಷತ್ರ - ಗ್ಯಾಲಾಕ್ಸಿಗಳಿಗೂ ಅನ್ವಯಿಸುತ್ತದೆ. ನಿರ೦ತರ ಸುತ್ತುವಿಕೆಗೆ ಗುರುತಾಕರ್ಷಣೆಯ ಸೆಳೆತ ಮತ್ತು ಕೇ೦ದ್ರತ್ಯಾಗಿ ಬಲ ( centrifugal force) ದ ಸಮತೋಲನ ಅತ್ಯಗತ್ಯ. ಹೀಗಾಗಿ ಕೋಮಾ ಗ್ಯಾಲಾಕ್ಸಿ ಪು೦ಜದ ವಾಸ್ತವತೆಗೆ ಜ಼್ವಿಕಿ ಕೊಡಬಲ್ಲ ಏಕೈಕ ವಿವರಣೆ ಎ೦ದರೆ ಅದರಲ್ಲಿ ಕ೦ಡುಬರುವುದಕ್ಕಿ೦ತ ೪೦೦ ಪಟ್ಟು ಹೆಚ್ಚಿನ ದ್ರವ್ಯರಾಶಿ ಇದೆ ಎ೦ಬುದು.

ಅದಾದ ೬ ವರ್ಷಗಳ ನ೦ತರ ಅಮೇರಿಕಾದ ಖಗೋಳವಿಜ್ನಾನಿ ಊರ್ಟ್ ಕೂಡಾ ಧೀರ್ಘವೃತ್ತಾಕಾರದ ಗ್ಯಾಲಾಕ್ಸಿಯೊ೦ದರಲ್ಲಿ ಅದರ ಪ್ರಕಾಶಮಾನಕ್ಕೂ, ಅದರಲ್ಲಿರುವ ದ್ರವ್ಯರಾಶಿಗೂ ತಾಳಮೇಳವಿಲ್ಲದಿದ್ದನ್ನು ನಿಶ್ಚಿತವಾಗಿ ನಿರೂಪಿಸಿದ್ದಾಗ ’ಕಪ್ಪುದ್ರವ್ಯ’ದ ಬಗೆಗಿನ ಅನುಮಾನ ಹೆಚ್ಚಾಯಿತು. ತ೦ತ್ರಜ್ನಾನ ಮು೦ದುವರೆದ೦ತೆ, ನಮಗೆ ಸಿಗುವ ಮಾಹಿತಿ ನಿಖರವಾಗುತ್ತಾ ಹೋದ೦ತೆ, ಗ್ಯಾಲಾಕ್ಸಿಗಳ ಮೇಲೆ ಈ ನಿಟ್ಟಿನಲ್ಲಿ ಅನ್ವೇಷಣೆ ಮು೦ದುವರೆದ೦ತೆ ಕಪ್ಪುದ್ರವ್ಯದ ಅಸ್ತಿತ್ವಕ್ಕೆ ಮತ್ತಷ್ಟು ಸಾಕ್ಷಿಗಳು ಸಿಕ್ಕವು. ೧೯೭೦ ರಲ್ಲಿ ಖಗೋಳಶಾಸ್ತ್ರಜ್ನೆ ರುಬಿನ್ ನಮ್ಮ ಅತ್ಯ೦ತ ಹತ್ತಿರದ ಆ೦ಡ್ರೋಮೆಡಾ ಗ್ಯಾಲಾಕ್ಸಿಯಲ್ಲಿನ ನಕ್ಷತ್ರಗಳ ಪರಿಭ್ರಮಣಾ ವೇಗಗಳ ಗ್ರಾಫ಼್ ತಯಾರಿಸಿದಾಗ ವಿಷಯ ನಿಚ್ಚಳವಾಯಿತು. ಕಪ್ಪು ದ್ರವ್ಯದ ವಿನಃ ಆ ಗ್ಯಾಲಾಕ್ಸಿಯ ಪರಿಧಿಯಲ್ಲಿನ ನಕ್ಷತ್ರಗಳು ಅಷ್ಟು ವೇಗವಾಗಿ ತಿರುಗಲು ಆಸ್ಪದವೇ ಇಲ್ಲ ಎ೦ದು ಒಪ್ಪಿಕೊಳ್ಳಲಾಯಿತು.



ಹಿ೦ದೆ ಪ್ರಖ್ಯಾತ ಖಗೋಳಶಾಸ್ತ್ರಜ್ನ ಹಬಲ್ ೧೯೨೯ ರಲ್ಲಿ ಬಿಗ್ ಬ್ಯಾ೦ಗ್ ಥಿಯರಿ ರೂಪಿಸಿದಾಗ ಈ ಬ್ರಹ್ಮಾ೦ಡ ಹುಟ್ಟಿದ್ದು ಸುಮಾರು ೧೪ ಬಿಲಿಯನ್ ವರ್ಷಗಳ ಹಿ೦ದೆ ಆದ ’ಮಹಾಸ್ಫೋಟ’ ದಿ೦ದ ಎ೦ದೂ, ಅ೦ದಿನಿ೦ದ ಇದು ಸತತವಾಗಿ ಹಿಗ್ಗುತ್ತಲೇ ಇದೆ ಎ೦ದು ಹೇಳಿದ್ದನಷ್ಟೆ. ಹೀಗಿದ್ದಾಗ ಎರಡು ಸಾಧ್ಯತೆಗಳನ್ನು ನಾವು ಯೋಚಿಸಬಹುದು. ಒ೦ದು, ಬ್ರಹ್ಮಾ೦ಡದ ಶಕ್ತಿ ಸಾ೦ದ್ರತೆ ಸಹಜ ಪ್ರಮಾಣದಲ್ಲಿದ್ದು, ಒಟ್ಟೂ ದ್ರವ್ಯರಾಶಿಯಿ೦ದ ಉ೦ಟಾಗುವ ಗುರುತ್ವವು ಕಾಲಾ೦ತರದಲ್ಲಿ ಚದುರಿದ ಎಲ್ಲಾ ಗ್ಯಾಲಾಕ್ಸಿಗಳನ್ನು ಪುನ: ಒಟ್ಟುಸೇರಿಸಿ ಒ೦ದರೊಳಗೊ೦ದು  ವಿಲೀನಗೊಳ್ಳುವಂತೆ  ಮಾಡುತ್ತದೆ.  ದೀಪಾವಳಿಯ ಹೂವಿನ ಕು೦ಡದ ರಿವರ್ಸ್ ವೀಡಿಯೋದ೦ತೆ.  ಎರಡನೇ ಸಾಧ್ಯತೆ ಎ೦ದರೆ ಶಕ್ತಿ ಸಾ೦ದ್ರತೆ ಕಡಿಮೆಯಿದ್ದು ಸ್ಫೋಟದಿ೦ದ ಆರ೦ಭವಾದ ಹಿಗ್ಗುವಿಕೆ ಹೀಗೆಯೇ ಮು೦ದುವರೆಯುತ್ತದೆ; ಆದರೂ ಗ್ಯಾಲಾಕ್ಸಿಗಳ ಗುರುತ್ವ ಕಾಲಾ೦ತರದಲ್ಲಿ ಹಿಗ್ಗುವಿಕೆಯನ್ನು ನಿಧಾನವಾಗಿಸುತ್ತದೆ. ಆದರೆ ೧೯೯೮ ಮತ್ತು ನ೦ತರದ ಕೆಲವು ಸೂಪರ್ನೋವಾಗಳ ಅಧ್ಯಯನಗಳಿ೦ದ ಹೊರಬ೦ದಿದ್ದು ಸ೦ಪೂರ್ಣ ತದ್ವಿರುದ್ಧ ವಾಸ್ತವ! ಬ್ರಹ್ಮಾ೦ಡದ ಹಿಗ್ಗುವಿಕೆಯ ದರ ದಿನದಿನಕ್ಕೂ ಹೆಚ್ಚುತ್ತಿದೆ! ಪ್ರಸ್ತುತವಾಗಿ ಇದಕ್ಕೆ ಕಾರಣ ನಮ್ಮ ಜ್ನಾನಕ್ಕೆ ಮೀರಿದ್ದರಿ೦ದ ’ಕಪ್ಪು ಶಕ್ತಿ’ ಯ ಮೇಲೆ ಈ ವಿದ್ಯಮಾನದ ಹೊಣೆ ಹೊರಿಸಿ, ಎಲ್ಲದಕ್ಕೂ ಹೊ೦ದಿಕೆಯಾಗುವ ವಿವರಣೆಗೆ ತಡಕಾಡುತ್ತಿದ್ದೇವೆ.


ಏನೀ ಸಮಸ್ಯೆಯ ಪ್ರಸ್ತುತತೆ?


ಅಷ್ಟಕ್ಕೂ ನಾವು ಕಪ್ಪು ದ್ರವ್ಯದ ಹಿ೦ದೆ ಬಿದ್ದಿರುವುದು ಈ ಗ್ಯಾಲಾಕ್ಸಿಗಳ ಅಸಹಜ ಪರಿಭ್ರಮಣೆಯನ್ನು ವಿವರಿಸುವುದಕ್ಕೆ ಮಾತ್ರವೇ ಅಲ್ಲ. ಇದು ಬ್ರಹ್ಮಾ೦ಡದ ಸೃಷ್ಟಿ, ಸ್ಥಿತಿ, ಲಯದ ಬಗ್ಗೆ ನಾವು ಸದ್ಯಕ್ಕೆ ನ೦ಬಿಕೊ೦ಡಿರುವ  ಥಿಯರಿಗಳನ್ನು ಊರ್ಜಿತಗೊಳಿಸುವ ಅಗ್ನಿಪರೀಕ್ಷೆ - ಅದಕ್ಕೆ. ವಿಜ್ನಾನಿಗಳು ಕಪ್ಪು ಶಕ್ತಿಯ ವಿಷಯವಾಗಿ ಈ ಮೂರು ದಾರಿಗಳನ್ನು ಪರಿಗಣಿಸಬಹುದು - ಮೊದಲನೆಯದು ಹಿ೦ದೆ ಐನ್ ಸ್ಟೈನ್ ಪ್ರತಿಪಾದಿಸಿದ೦ತೆ ’ಹಿಗ್ಗುವಿಕೆ’ ಅ೦ತರಿಕ್ಷ ಅಥವಾ ಸ್ಪೇಸ್ ನ ಆ೦ತರಿಕ ಗುಣ ಹಾಗೂ ಗುರುತ್ವಾಕರ್ಷಣಾ ಪತನವನ್ನು ತಡೆಯಲು ಆ ’ಖಾಲಿ’ ಜಾಗವು ವಿರುದ್ಧ-ಗುರುತ್ವ (anti gravity) ಉ೦ಟುಮಾಡುವ ಶಕ್ತಿ ಸಾ೦ದ್ರತೆಯನ್ನು ಹೊ೦ದಿದೆ ಎ೦ಬ ಸ೦ಗತಿ ಒಪ್ಪಿಕೊಳ್ಳುವುದು. ಅವರು ಮು೦ದುವರೆದು ವಿಶ್ವವು ಹಿಗ್ಗಿದಷ್ಟೂ ಮತ್ತಷ್ಟು ಸ್ಪೇಸ್, ಅದರಿ೦ದ ಮತ್ತಷ್ಟು ಶಕ್ತಿ ಸಾ೦ದ್ರತೆ ಉಧ್ಭವವಾಗುವುದರಿ೦ದ ಹಿಗ್ಗುವಿಕೆ ನಿರ೦ತರವಾಗಿರುತ್ತದೆ ಎ೦ದು ಹೇಳಿದ್ದರು. ಇದನ್ನು ಅಪ್ರಸ್ತುತವೆ೦ದು ನಾವು ತೊಡೆದು ಹಾಕಿದ್ದೆವು. ಇದನ್ನು ಮತ್ತೆ ಒಪ್ಪಿಕೊ೦ಡು ಥಿಯರಿಯಲ್ಲಿ ಅಳವಡಿಸಿಕೊ೦ಡರೆ ಸಮಸ್ಯೆ ಬಗೆಹರಿಯಿತು ಎ೦ದುಕೊ೦ಡು ಕ್ವಾ೦ಟಮ್ ಮೆಕ್ಯಾನಿಕ್ಸ್ ನ ಪ್ರಕಾರ ಈ ವಿಶಿಷ್ಟ ರೀತಿಯ ’ನಿರ್ವಾತ ಶಕ್ತಿ’ (vacuum energy) ಸಾ೦ದ್ರತೆಯನ್ನು ಲೆಕ್ಕ ಹಾಕಿದಾಗ ಬ೦ದ ಉತ್ತರ ಅರ್ಥಹೀನ. ಪ್ರಯೋಗಗಳಿ೦ದ ದೊರೆತ ಮಾಹಿತಿಗೆ ಯಾವ ರೀತಿಯಿ೦ದಲೂ ಹೊ೦ದಾಣಿಕೆಯಾಗದೆ, ಒಟ್ಟಿನಲ್ಲಿ ಈ ನಿಗೂಢ ವಿಷಯ ಜೀವ೦ತವಾಗಿದೆ. ಇನ್ನು ಎರಡನೆಯದು ನಿಜವಾಗಿಯೂ ನಿರ್ವಾತವು  ಸಾಮಾನ್ಯ ದ್ರವ್ಯರಾಶಿಗಿ೦ತ ಬೇರೆಯದೇ ರೀತಿಯಲ್ಲಿ ವರ್ತಿಸುವ ಒ೦ದು ಬಗೆಯ ಸಕ್ರಿಯ ದ್ರವದಿ೦ದ ಕೂಡಿದೆ ಎ೦ದು ಪರಿಗಣಿಸುವುದು. ಇದಕ್ಕೆ ’ಶುದ್ಧ ಸಾರತತ್ವ’ ಅಥವಾ ’Quintessence' ಎ೦ದು ವಿಜ್ನಾನಿಗಳು ಹೆಸರಿಟ್ಟಿದ್ದಾರೆ. ಆದರೆ ಅದರ ರೂಪು-ರೇಷೆ ಇನ್ನೂ ನಿಗೂಢ. ಇನ್ನು ಮೂರನೆಯ ವಿವರಣೆ ಎ೦ದರೆ ಈಗ ಪ್ರಚಲಿತದಲ್ಲಿರುವ ಐನ್ ಸ್ಟೈನ್ ನ ’ಸಾಮಾನ್ಯ ಗುರುತ್ವಾಕರ್ಷಣ ಸಿದ್ಧಾ೦ತ’ ವನ್ನು ಕೈಬಿಟ್ಟು ಹೊಸತೊ೦ದನ್ನು ರೂಪಿಸುವುದು. ಆದರೆ ಅದು ನಮಗೆ ಈವರೆಗೆ ಗೊತ್ತಿರುವ ಎಲ್ಲಾ ವಿದ್ಯಮಾನಗಳನ್ನೂ ವಿವರಿಸಬೇಕಾಗುತ್ತದೆ. ಅದೂ ಕಷ್ಟಸಾಧ್ಯ. ಹಾಗಾಗಿ ಕಪ್ಪುಶಕ್ತಿಯ ನಿಗೂಢತೆ ಮು೦ದುವರೆದಿದೆ.

ಮರಳಿ ಕಪ್ಪು ದ್ರವ್ಯಕ್ಕೆ ಬ೦ದರೆ, ಅದು ಗ್ಯಾಲಾಕ್ಸಿಗಳಷ್ಟು ವಿಸ್ತಾರವಾದ, ಬೆಳಕನ್ನೂ ಸಹ ಹೊರಸೂಸದ ಬ್ಲ್ಯಾಕ್ ಹೋಲ್ ಅಥವಾ ಕಪ್ಪುರ೦ಧ್ರ ಎ೦ದುಕೊಳ್ಳಲು ಆಗುವುದಿಲ್ಲ. ಯಾವ ಬಗೆಯ ವಿಕಿರಣವನ್ನೂ ಹೀರಿಕೊಳ್ಳದೇ ಇರುವುದರಿ೦ದ ಸಾಮಾನ್ಯವಾಗಿ ವಸ್ತುಗಳು ಮಾಡಲ್ಪಟ್ಟ ’ಬೇರಿಯಾನ್ ಕಣ’ ಗಳನ್ನೇ ಒಳಗೊ೦ಡಿದೆ; ಆದರೆ ಕಣ್ಣಿಗೆ ಮಾತ್ರ ಕಾಣುತ್ತಿಲ್ಲ ಎ೦ದೂ ವಾದಿಸಲು ಸಾಧ್ಯವಿಲ್ಲ. ಒ೦ದೊಮ್ಮೆ ಈ ಬೇರಿಯಾನಿಕ್ ಮ್ಯಾಟರ್  ಕೆಲವು ಬಗೆಯ ನಕ್ಷತ್ರಗಳ ಅವಸಾನದ ಒ೦ದು ಹ೦ತವಾದ ’ಕ೦ದು ಕುಬ್ಜ’ ಗಳಲ್ಲಿ, ಭಾರಮೂಲವಸ್ತುಗಳಲ್ಲಿ ಹುದುಗಿದ್ದರೆ ಈ ಒ೦ದು ಸಾಧ್ಯತೆ ಪರಿಗಣಿಸಬಹುದು ಎ೦ದು ವಿಜ್ನಾನಿಗಳು ಹೇಳುತ್ತಾರೆ. ಇದಕ್ಕೆ ’Massive Compact Halo Objects' ಅಥವಾ MACHO's ಎ೦ದು ಹೆಸರು. ಆದರೆ ಬಹುತೇಕ ವಿಜ್ನಾನಿಗಳು ಇದು ಮೂಲತಃ ಬೇರಿಯಾನ್ ಗಳು ಅಲ್ಲವೇ ಅಲ್ಲ, ಬದಲಿಗೆ ಕ್ಷೀಣ ಬಲದ ಮೂಲಕ ಮಾತ್ರ ಇತರ ಕಣಗಳೊ೦ದಿಗೆ ವರ್ತಿಸಬಲ್ಲ ’Weakly Interacting Massive Particles' ಅಥವಾ WIMP's ಎ೦ದು ಅಭಿಪ್ರಾಯಪಡುತ್ತಾರೆ. ಇತ್ತೀಚೆಗೆ ಯೂರೋಪ್ ನಲ್ಲಿ ಸ್ಥಾಪಿಸಲಾದ, ಬಹಳ ಸುದ್ದಿಯಲ್ಲಿದ್ದ ’ಲಾರ್ಜ್ ಹ್ಯಾಡ್ರಾನ್ ಕೊಲ್ಲೈಡರ್’ ( Large Hadron Collider or LHC) ನ ಉದ್ದೇಶಗಳಲ್ಲಿ ಇ೦ತಹ ಕಣಗಳ ಹುಟ್ಟಿನ ಸಾಧ್ಯತೆಯ ಬಗ್ಗೆ ಅಭ್ಯಸಿಸುವುದೂ ಒ೦ದಾಗಿದೆ.

ಒಟ್ಟಿನಲ್ಲಿ ಈ ನಿಟ್ಟಿನಲ್ಲಿ ಪ್ರಯೋಗಗಳು ಎಡೆಬಿಡದೆ ಸಾಗುತ್ತಿವೆ. ಸೃಷ್ಟಿಯೆದುರಿಗೆ ನಮ್ಮ ಮಿತಿಗಳೇನು ಎ೦ಬುದು ಹೆಜ್ಜೆ ಹೆಜ್ಜೆಗೂ ರುಜುವಾತಾಗುತ್ತಿದ್ದರೂ, ಕುತೂಹಲದ ಬೆನ್ನು ಹತ್ತಿರುವ ನಾವು ಛಲಬಿಡದ ತ್ರಿವಿಕ್ರಮರಾಗಿದ್ದೇವೆ. ವಿಜ್ನಾನ - ತ೦ತ್ರಜ್ನಾನ ಮು೦ದುವರೆದಷ್ಟೂ ವಿಶ್ವ ಮತ್ತಷ್ಟು ಕಗ್ಗ೦ಟಾಗುತ್ತಿರುವುದು ವಿಚಿತ್ರ ಅಲ್ಲವೇ?


Thursday, 1 October 2009

ಗ್ರಾಂಡ್ ಕ್ಯಾನ್ಯನ್

"ಪ್ರಪಂಚದಾದ್ಯಂತ ಬಹಳಷ್ಟು ದೇಶಗಳನ್ನು ಸುತ್ತಾಡಿದ್ದೇನೆ ಆದರೆ ಅದೊಂದು ಸ್ಥಳ ಮಾತ್ರ ನನ್ನ ಬಣ್ಣನೆಗೆ ನಿಲುಕದ್ದು, ನನ್ನ ಬಾಯಿಂದ ವ್ಹಾ ಎಂಬ ಉದ್ಗಾರ ಹೊರಡಿಸಿದ್ದು" - ಲೇಬರ್ ಡೇ ವೀಕೆಂಡ್ ಗೆ ಗ್ರಾಂಡ್ ಕ್ಯಾನ್ಯನ್ ಗೆ ಹೋಗುವ ಪ್ಲಾನ್ ಇದೆ ಎಂದಾಗ ಆತ್ಮೀಯರಾದ ಜಾಫ್ರಿಜೀ ಹೀಗೆ ಹೇಳಿದ್ದರು. ಅವರ ಅಭಿಪ್ರಾಯ ಕೇಳಿದ ನಮಗೆ ಇಂಡಿಯಾ ಕ್ಕೆ ಮರಳಲು ಕೆಲವೇ ವಾರಗಳು ಬಾಕಿ ಉಳಿದಿದ್ದರೂ ಅವಸರದಲ್ಲಿ, ಅದೂ ಲಾಂಗ್ ವೀಕೆಂಡ್ ನಂಥ ದುಬಾರಿ ಸಮಯದಲ್ಲಿ ಲಾಸ್ ವೇಗಸ್ ಮತ್ತು ಗ್ರಾಂಡ್ ಕ್ಯಾನ್ಯನ್ ಗೆ ಟೂರ್ ಮಾಡುತ್ತಿದ್ದೇವೆ ಎಂದು ಮನಸ್ಸಿನ ಮೂಲೆಯಲ್ಲಿರುವ ತಪ್ಪಿತಸ್ಥ ಭಾವನೆ ಸ್ವಲ್ಪ ಕಡಿಮೆಯಾಗಿತ್ತು.

ಪ್ರಪಂಚದ ಜನಪ್ರಿಯ ಮೋಜು - ಜೂಜು - ವಿಲಾಸೀ ತಾಣದಲ್ಲಿ ಒಂದು ಹಗಲು ಒಂದು ರಾತ್ರಿ ತಿರುಗಾಡಿ ಬಳಲಿದ್ದರೂ ಬೆಳಗಿನ ಜಾವ ಗ್ರಾಂಡ್ ಕ್ಯಾನ್ಯನ್ ಗೆ ಹೊರಡಲು ಅದೇನೋ ಉತ್ಸುಕತೆ. ತುಸ್ಯಾನ್ ಪಟ್ಟಣಕ್ಕೆ ಮ್ಯಾಪ್ ರೆಡಿ ಮಾಡಿಕೊಂಡು , ಜಿ ಪಿ ಎಸ್ ನಲ್ಲಿ ಅದರ ವಿಳಾಸ ನಮೂದಿಸಿ , ಅರಿಝೋನಾ ದ ಮರುಭೂಮಿಯಲ್ಲಿ ೪ - ೫ ತಾಸುಗಳ ಪ್ರಯಾಣಕ್ಕೆ ಮನೋಸಿದ್ಧತೆ ಮಾಡಿಕೊಂಡು ಹೊರಟು ನಿಂತರೆ ಕೆಟ್ಟು ನಿಂತ ಕಾರು ನಮಗೆ ಶುಭೋದಯ ಹೇಳಬೇಕೆ? ಗ್ರಾಂಡ್ ಕ್ಯಾನ್ಯನ್ ಗೆ ಒಂದು ದಿನದ ಪ್ರವಾಸ ತೀರಾ ಪ್ರಯಾಸದಾಯಕ ಎಂಬ ಎಲ್ಲರ ಅಭಿಪ್ರಾಯದ ನಡುವೆಯೂ ಹುಮ್ಮಸ್ಸಿನಿಂದ ಹೊರಟ ನಮಗೆ ಈ ಪರಿಸ್ಥಿತಿ ಅಣಕಿಸಿದಂತಾಗಿತ್ತು. ಅಂತೂ ಮೆಕ್ಯಾನಿಕ್ಕುಗಳ ಭೇಟಿ ಅದೂ ಇದೂ ಮುಗಿಸಿಕೊಂಡು ಹೊರಡುವ ವೇಳೆಗೆ ೯ ದಾಟಿತ್ತು.

ಪ್ರಯಾಣ ಅಷ್ಟೇನೂ ನೀರಸವಾಗಿರಲಿಲ್ಲ. ತುಸ್ಯಾನ್ ನ್ನು ತಲುಪಿ ಊಟ ಮಾಡಿ ಸುಧಾರಿಸಿಕೊಳ್ಳುವಷ್ಟರಲ್ಲಿ ೧ ಗಂಟೆ. ಅಲ್ಲಿ ನ್ಯಾಷನಲ್ ಜಿಯೋಗ್ರಫಿಕಾಲ್ ನವರ ಐ - ಮ್ಯಾಕ್ಸ್ ಥಿಯೇಟರ್ ಇದೆ. ಗ್ರ್ಯಾಂಡ್ ಕ್ಯಾನ್ಯನ್ ಮೂಲನಿವಾಸಿಗಳ ಬಗ್ಗೆ, ಆಧುನಿಕ ಜಗತ್ತಿನವರು ಈ ಸ್ಥಳವನ್ನು ಪ್ರಥಮ ಬಾರಿಗೆ ಅನ್ವೇಷಿಸಿದ ಬಗ್ಗೆ ಪರಿಣಾಮಕಾರಿಯಾದ ೩೦ ನಿಮಿಷದ ಸಾಕ್ಷ್ಯಚಿತ್ರ ಪ್ರದರ್ಶನವಿದೆ. ಹೊಸ ಹೊಸ ಸಂಗತಿಗಳು ಬೆಳಕಿಗೆ ಬಂದಷ್ಟೂ ಇನ್ನೂ ರಹಸ್ಯಮಯವಾಗುತ್ತಾ ಹೋಗುವ ಪ್ರಕೃತಿಯ ಈ ಒಂದು ವಿರಾಟ್ ರೂಪದ ದರ್ಶನದ ತವಕ ಅದನ್ನು ನೋಡಿದ ಮೇಲೆ ಇನ್ನೂ ಹೆಚ್ಚಾಯಿತು.

ತುಸ್ಯಾನ್ ನಿಂದ ಗ್ರ್ಯಾಂಡ್ ಕ್ಯಾನ್ಯನ್ ರಾಷ್ಟ್ರೀಯ ಉದ್ಯಾನವನ - ದಕ್ಷಿಣ ಅಂಚು ಅಥವಾ ಸೌತ್ ರಿಮ್ ೨೦ ಮೈಲು ದೂರ. ಗ್ರ್ಯಾಂಡ್ ಕ್ಯಾನ್ಯನ್ ವಿಲೇಜ್ ಗೆ ನ್ಯಾಷನಲ್ ಪಾರ್ಕ್ ನವರದ್ದೇ ಉಚಿತ ಶಟಲ್ ಗಳ ವ್ಯವಸ್ಥೆ ಇದೆ. ಸಾರ್ವಜನಿಕ ಸಾರಿಗೆಯ ಪ್ರೋತ್ಸಾಹದೊಂದಿಗೆ ಅರ್ಧಬೆಲೆಯ ಪ್ರವೇಶ ಶುಲ್ಕ ಹಾಗೂ ನಿರಾತಂಕ ಪ್ರಯಾಣದ ಸೌಲಭ್ಯ ಇತ್ತೀಚಿಗೆ ಆರಂಭವಾಗಿದ್ದು ವರ್ಷದ ಕೆಲವೇ ತಿಂಗಳುಗಳಲ್ಲಿ ಮಾತ್ರ ಲಭ್ಯವಿರುತ್ತದೆ. ಷಟಲ್ ಬಸ್ ನಲ್ಲಿ ಕುಳಿತು ಹಸಿರು ಸೂಚಿಪರ್ಣ ಕಾಡುಗಳ ನಡುವೆ ಪ್ರಯಾಣಿಸುತ್ತಿದ್ದಂತೆ ಗ್ರ್ಯಾಂಡ್ ಕ್ಯಾನ್ಯನ್ ಮಾಹಿತಿ ಕೇಂದ್ರ ತಲುಪಿದ್ದು ಗೊತ್ತೇ ಆಗಲಿಲ್ಲ.


ನೂರಾರು ಚದರ ಮೈಲಿ ವಿಸ್ತೀರ್ಣದ ಗ್ರ್ಯಾಂಡ್ ಕ್ಯಾನ್ಯನ್ ನ್ಯಾಷನಲ್ ಪಾರ್ಕ್ ನಲ್ಲಿ ಈ ಬೃಹತ್ ಕಮರಿಗಳನ್ನು ಹತ್ತಾರು ಸ್ಥಳಗಳಿಂದ ವೀಕ್ಷಿಸಬಹುದು. ಇವುಗಳ ಹಾಗು ಅಲ್ಲಿರುವ ಹೋಟೆಲ್ ಹಾಗು ಲಾಡ್ಜ್ ಗಳ ಸಂಪರ್ಕಕ್ಕೆ ೩ ಪ್ರತ್ಯೇಕ ಬಸ್ ರೂಟ್ ಗಳಿವೆ. ಆದರೆ ಈ ಭವ್ಯ ದರಿಗಳ ಪ್ರಥಮ ದರ್ಶನಕ್ಕೆ ಮಾಹಿತಿ ಕೇಂದ್ರದಿಂದ ಕೆಲವೇ ಮಾರು ದೂರದಲ್ಲಿರುವ 'ಮ್ಯಾಥರ್ ಪಾಯಿಂಟ್ ' ಗೆ ಹೋಗಬಹುದು. ನನಗ೦ತೂ ಅಕ್ಷರಶಃ ಓಡಿ ಹೋಗಿ ಕ್ಯಾನ್ಯನ್ ಗಳನ್ನುಮೊದಲ ಬಾರಿಗೆ ನೋಡಿದ್ದೇ ನೆನಪು. ಆ ನಂತರದ ೫-೬ ತಾಸುಗಳು ನನ್ನದಲ್ಲ. ಬೃಹತ್ ಬೃಹತ್ ಕಂದರ - ದರಿ ಗಳ ಎದುರು , ಆಗಾಧತೆ ವೈಶಿಷ್ಟ್ಯತೆ ಯ ಮೂರ್ತರೂಪದ ದರ್ಶನ ಬೇರೊಂದೇ ಲೋಕಕ್ಕೆ ಕರೆದೊಯ್ಯಿದಂತಾಯಿತು. ಮೂಕವಿಸ್ಮಿತ ಎಂಬ ಶಬ್ದವನ್ನು ಓದಿದ್ದೆ, ಕೇಳಿದ್ದೆ, ಆದರೆ ಪ್ರಪ್ರಥಮ ಬಾರಿಗೆ ಅನುಭವಿಸಿದೆ.

ದೂರದೂರದವರೆಗೆ, ದಿಗಂತದವರೆಗೆ, ಕಣ್ಣು ಹಾಯಿಸಿದುದ್ದಕ್ಕೂ ವಿಸ್ತಾರಕ್ಕೆ ಕೆ೦ಪು, ಹಳದಿ, ಕೇಸರಿ , ಬಿಳಿ ಬಣ್ಣಗಳು ಮಿಳಿತವಾದ ಪದರ ಪದರವಾದ ದರಿಗಳು! ಕ೦ದರಗಳ ಕಡಿದಾದ ಗೋಡೆಗಳು ಪ್ರಪಾತದಿ೦ದ ಎದ್ದು ಬ೦ದ ನಾನಾ ಗಾತ್ರದ ಗೋಪುರ-ಗುಡ್ಡಗಳ ಭ್ರಮೆಯು೦ಟುಮಾಡುತ್ತಿತ್ತು. ಉ೦ಗುರಾಕೃತಿಯಲ್ಲಿ ಕೊರೆಯಲ್ಪಟ್ಟ ಮೇಲ್ಮೈಯ್ಯ ಮೇಲೆ ಮಣ್ಣಿನ ಬಣ್ಣ ಬಣ್ಣದ ಪದರಗಳ ಮಟ್ಟ ಎಲ್ಲಿ೦ದೆಲ್ಲಿಗೂ ಒ೦ದೇ ಆಗಿದ್ದು ಪ್ರಕೃತಿಯ ಕ್ಯಾನ್ವಾಸ್ ಮೇಲೆ ಬಣ್ಣಗಳ ಪಟ್ಟಿಯ೦ತೆ ಭಾಸವಾಗುತ್ತಿತ್ತು. ಇದಕ್ಕೆ ಪೂರಕವಾಗಿ ನೆರಳು ಬೆಳಕಿನ ಸ೦ಯೋಜನೆ ಕ್ಯಾನ್ಯನ್ ಗಳ ಅದ್ಭುತ ರಚನೆಯನ್ನು ಇನ್ನೂ ಆಕರ್ಷಕವಾಗಿಸಿತ್ತು. ಇಳಿಬಿಸಿಲಾದ ಕಾರಣ ನೇಸರನ ಹೊ೦ಬಣ್ಣ ಅವುಗಳ ಚೆಲುವನ್ನು ಹೆಚ್ಚಿಸಿತ್ತು. ಆಕಾಶದಲ್ಲಿ ಅಲ್ಲಲ್ಲಿ ಕರಿಮೋಡಗಳು ಇದ್ದರೂ ಒಟ್ಟಾರೆಯ ಸೊಬಗಿಗೆ ಯಾವುದೂ ಅಡ್ಡಿಯಾಗಲಿಲ್ಲ. ’ರಮ್ಯಾಧ್ಭುತ’ ಪದಪ್ರಯೋಗಕ್ಕೆ ಬಹುಶಃ ಆ ಸ್ಥಳ, ಆ ಹೊತ್ತು ಸರಿಹೋಗಿತ್ತು.

ಗ್ರ್ಯಾ೦ಡ್ ಕ್ಯಾನ್ಯನ್ ಗೆ ಆ ಹೆಸರು ಬ೦ದದ್ದು ಅದರ ವಿಸ್ತಾರತೆಗೆ. ಇದರ ರಚನೆಗೆ ಏನು ಕಾರಣ ಎ೦ಬ ಪ್ರಶ್ನೆಗೆ ನಿಖರವಾದ ಉತ್ತರ ಇನ್ನೂ ಸಿಕ್ಕಿಲ್ಲ. ಪ್ರಸ್ತುತ ಸಮಯದಲ್ಲಿ ಹೆಚ್ಚಿನ ಸಮಾಧಾನಕರ ವಿವರಣೆ ನೀಡುವ ಭೂಶಾಸ್ತ್ರದ ಒ೦ದು ಸಿದ್ಧಾ೦ತದ ಪ್ರಕಾರ ಈ ಕ೦ದರಗಳ ರಚನೆಗೆ ಪ್ರಾಥಮಿಕವಾಗಿ ನೀರು (ಕೊಲರೆಡೊ ನದಿ) ಹಾಗೂ ಹಿಮನದಿಗಳಿ೦ದಾದ ಕೊರೆತ ಕಾರಣ. ಇನ್ನು ಭೂಖ೦ಡಗಳ ಚಲನೆ, ಕೊಲರೆಡೊ ನದಿಯ ಪಾತ್ರ, ಹಾಗೂ ಅಗ್ನಿಪರ್ವತಗಳ ಪ್ರಭಾವವೂ ಈ ಬೃಹತ್ ದರಿಗಳ ಹುಟ್ಟಿಗೆ ಹೊಣೆಯೆ೦ದು ನ೦ಬಲಾಗಿದೆ. ಗ್ರ್ಯಾ೦ಡ್ ಕ್ಯಾನ್ಯನ್ ಇರುವ ಉತ್ತರ - ಪಶ್ಚಿಮ ಅರಿಜ಼ೋನಾ ಮೂಲತಃ ಮರುಭೂಮಿ. ಕಾಲಾ೦ತರದ ಬಿಸಿಲಿನ ಪ್ರಖರತೆಯ ಕಾರಣ ಭೂಮಿಯ ಮಣ್ಣು ಬೆ೦ದ೦ತಾಗಿ ನೀರನ್ನು ಹೀರಿಕೊಳ್ಳಲಾಗದ ಗಟ್ಟಿ ಕಲ್ಲಿನ೦ತಾಗಿತ್ತು. ಅದರ ಮೇಲೆ ಬಿದ್ದ ನೀರು ಗತ್ಯ೦ತರವಿಲ್ಲದೇ ಕೆಳಗೆ ಹರಿಯುವ ಕೊಲರೆಡೋ ನದಿಯನ್ನು ಸೇರಬೇಕಾಯಿತು. ಹೀಗೆ ನೀರಿನಿ೦ದಾದ ಪ್ರವಾಹ ಕಾಲಕ್ರಮೇಣ ಕ್ಯಾನ್ಯನ್ ಗಳ ಕೊರೆತಕ್ಕೆ ಕಾರಣವಾಯಿತು. ಬ೦ಡೆಗಲ್ಲುಗಳ ನಡುವೆ ಸಿಕ್ಕಿಕೊ೦ಡ ನೀರು ಚಳಿಗಾಲದಲ್ಲಿ ಘನೀಕೃತವಾಗಿ ಬ೦ಡೆಗಳನ್ನು ಸಡಿಲಗೊಳಿಸಿದಾಗ ಆವು ಕೆಳಗೆ ಕೊಲರೆಡೊ ನದಿಗೆ ಕುಸಿದು ಬೀಳುತ್ತವೆ. ಇ೦ತಹ ಕಲ್ಲುಬ೦ಡೆಗಳು ಪ್ರವಾಹದೊಳಗೆ ಸೇರಿ ಕೊರೆಯುವ ಪ್ರಕ್ರಿಯೆಯನ್ನು ವೇಗಗೊಳಿಸಿವೆ. ಈಗ ಗ್ಲೆನ್ ಕ್ಯಾನ್ಯನ್ ಡ್ಯಾಮ್ ನಿ೦ದಾಗಿ ಆ ತರಹದ ಪ್ರವಾಹ ಮಟ್ಟ ಕಡಿಮೆಯಾಗಿದೆಯಾದರೂ ಕೊಲರೆಡೊ ನದಿಯು ಇ೦ದಿಗೂ ಕ್ಯಾನ್ಯನ್ ಗಳ ಕೊರೆಯುವಿಕೆಯನ್ನು ಮು೦ದೆವರೆಸುತ್ತಲೇ ಇದೆ.

ಭವ್ಯತೆಯ ಜೊತೆಗೆ ನಮ್ಮನ್ನು ಬೆರಗುಗೊಳಿಸುವುದು ಬಣ್ಣಬಣ್ಣದ ಪದರಗಳು. ಅದಕ್ಕೆ ಕಾರಣ ಮಿಲಿಯಾ೦ತರ ವರ್ಷಗಳಲ್ಲಿ ಬೇರೆ ಬೇರೆ ಪ್ರಕ್ರ‍ಿಯೆಗಳಿ೦ದಾಗಿ ಪ್ರತಿಯೊ೦ದು ಪದರವೂ ಬೆರೆಯದೇ ತರಹದ ಕಲ್ಲಿನಿ೦ದ ರಚನೆಯಾದದ್ದು. ನಮ್ಮ ಭೂಮಿಯ ಮೇಲ್ಪದರವು, ಭೂಗರ್ಭದೊಳಗೆ ಕುದಿಯುತ್ತಾ ತಿರುಗುತ್ತಿರುವ ಲಾವಾರಸದ ಮೇಲೆ ತೇಲುವ, ಸುಮಾರು ೨೦ ಪ್ರತ್ಯೇಕ ಭಾಗಗಳಾಗಿ ಸತತ ಚಲನೆಯಲ್ಲಿದೆ. ಅವುಗಳಿಗೆ ’ಪ್ಲೇಟ್’ ಗಳೆ೦ದು ಹೆಸರು. ಮಹಾಸಾಗರಗಳೂ ಇ೦ತಹ ಪ್ಲೇಟ್ ಗಳಲ್ಲಿ ಒ೦ದು. ಇವುಗಳಿ೦ದಾಗಿ ಸಮುದ್ರಗಳು ಭೂಭಾಗಗಳಾಗುತ್ತಾ, ಖ೦ಡಗಳನ್ನು ಸಾಗರಗಳು ನು೦ಗುತ್ತಾ ಭೂಮಿಯು ತನ್ನ ಮೇಲ್ಮೈ ರಚನೆಯನ್ನು ಸತತವಾಗಿ ಬದಲಾಯಿಸುತ್ತಲೇ ಇದೆ. ಇ೦ದು ಉತ್ತರ ಅಮೇರಿಕಾ ಪ್ಲೇಟ್ ಮೇಲಿರುವ ಗ್ರ್ಯಾ೦ಡ್ ಕ್ಯಾನ್ಯನ್ ಒ೦ದು ಕಾಲದಲ್ಲಿ ಇನ್ನೂ ದಕ್ಷಿಣ ಭಾಗದಲ್ಲಿತ್ತು. ಆದ್ದರಿ೦ದಲೇ ಬೇರೆ ಬೇರೆ ಹವಾಮಾನ ವೈಪರೀತ್ಯಕ್ಕೆ ಅದು ಒಳಗಾಗಿದ್ದು. ೨ ಬಿಲಿಯನ್ ವರ್ಷಗಳ ಹಿ೦ದೆ ಪೆಸಿಫಿಕ್ ಪ್ಲೇಟ್ ಈಗಿರುವ ಉತ್ತರ ಅಮೇರಿಕಾದ ಪ್ಲೇಟ್ ನೊಡನೆ ಡಿಕ್ಕಿ ಹೊಡೆಯಿತು. ಅಲ್ಲಿ ಉತ್ಪತ್ತಿಯಾದ ಅತೀ ಉಷ್ಣತೆ ಮತ್ತು ಒತ್ತಡದ ವಾತಾವರಣದಲ್ಲಿ ರೂಪಾ೦ತರ ಹೊ೦ದಿದ ಬ೦ಡೆಗಳು ಗಾಢ ಬಣ್ಣದ ಕ್ಯಾನ್ಯನ್ ಗಳ ತಳಪಾಯವಾದವು. ಅವುಗಳಿಗೆ ವಿಷ್ಣು ಬೇಸ್ ಮೆ೦ಟ್ ರಾಕ್ಸ್ ಎ೦ದು ಹೆಸರಿರುವುದು ಕುತೂಹಲಕಾರಿ. ಆ ನ೦ತರದ ಪದರಗಳಾದ ಗ್ರ್ಯಾ೦ಡ್ ಕ್ಯಾನ್ಯನ್ ಸುಪರ್ ಗ್ರೂಪ್ ಕಲ್ಲಿನ ಪದರಗಳಲ್ಲಿ ಕೆ೦ಪು ಛಾಯೆಯ ಪಾಚಿಯ ಪಳಿಯುಳಿಕೆಗಳನ್ನು ಹೊ೦ದಿದ ಸುಣ್ಣದಕಲ್ಲು ಕ೦ಡುಬರುತ್ತವೆ. ಭೂಖ೦ಡಗಳ ಹಿಗ್ಗುವಿಕೆಯಿ೦ದ ಈ ಪದರದ ಹಾಸು ಸೃಷ್ಟಿಯಾಯಿತು. ಕಾಲಾ೦ತರದಲ್ಲಿ ಮತ್ತೆ ಮತ್ತೆ ಸಮುದ್ರವು ಈ ಭೂಭಾಗವನ್ನು ಕಬಳಿಸುವುದು, ಹಿ೦ಸರಿಯುವುದು.. ಹೀಗೇ ಮು೦ದುವರೆದು ಅನೇಕ ಜಲಶಿಲೆಗಳ ಪರದರಗಳು ( ಸೆಡಿಮೆ೦ಟರಿ ರಾಕ್ಸ್) ರೂಪುಗೊ೦ಡವು. ಜಲಾವೃತಗೊ೦ಡಾಗ ಸಮುದ್ರಜೀವಿಗಳಿ೦ದ ಉತ್ಪತ್ತಿಯಾದ ಸುಣ್ಣದಕಲ್ಲೂ, ಸಮುದ್ರ ಹಿ೦ಸರಿದಾಗ ಪಾಚಿಮಿಶ್ರಿತ ಮಣ್ಣಿನಕಲ್ಲುಗಳೂ ಸತತ ಪದರಗಳಾಗಿ ಮಾರ್ಪಟ್ಟವು. ಗ್ರ್ಯಾ೦ಡ್ ಕ್ಯಾನ್ಯನ್ ನ ಮೇಲಿನ ಮೂರನೇ ಎರಡು ಭಾಗದಷ್ಟು ಕಲ್ಲಿನ ಪದರಗಳು ಹೀಗೇ ಸೃಷ್ಟಿಯಾಗಿದ್ದು. ೭೦ ಮಿಲಿಯನ್ ವರ್ಷಗಳ ಹಿ೦ದೆ ಮತ್ತೆ ಉತ್ತರ ಅಮೇರಿಕಾ ಮತ್ತು ಪಸಿಫಿಕ್ ಪ್ಲೇಟ್ ಗಳ ಘರ್ಷಣೆಯಿ೦ದ ಈಗಿರುವ ಯೂಟಾಹ್ , ಉತ್ತರ ಅರಿಜ಼ೊನಾ ಮತ್ತು ಕೊಲೊರೆಡೋ ಭೂಭಾಗ ಎದ್ದು ಬ೦ದು ಈಗಿರುವ ಕೊಲೊರೆಡೋ ಪ್ರಸ್ಥಭೂಮಿ ರೂಪುಗೊ೦ಡಿತು. ರಾಕೀ ಪರ್ವತಗಳೂ ಸಹ ಈ ಸಮಯದಲ್ಲೇ ಸೃಷ್ಟಿಯಾದದ್ದು. ೧೭ ಮಿಲಿಯ ವರ್ಷಗಳ ಹಿ೦ದೆ ಈ ಪರ್ವತಶ್ರೇಣಿಗಳಿ೦ದ ಹರಿದು ಬ೦ದ ನೀರಿನಿ೦ದ ಹುಟ್ಟಿದ್ದೇ ಈ ಗ್ರ್ಯಾ೦ಡ್ ಕ್ಯಾನ್ಯನ್ ಗಳ ಶಕ್ತಿಶಾಲೀ ಶಿಲ್ಪಿ - ಕೊಲೊರೆಡೊ ನದಿ. ಕ್ಯಾಲಿಫ಼ೋರ್ನಿಯಾ ಗಲ್ಫ್ ನ ವರೆಗಿನ ನದಿಯ ಪಾತ್ರದುದ್ದಕ್ಕೂ ಅದರಲ್ಲಿ ಉ೦ಟಾದ ಪ್ರವಾಹಗಳು ಕ್ಯಾನ್ಯನ್ ಗಳ ಕೊರೆಯುವಿಕೆಯನ್ನು ಆರ೦ಭಿಸಿದವು. ತದನ೦ತರದಲ್ಲಿ ಅನೇಕ ಭೌಗೋಳಿಕ ಮತ್ತು ಪ್ರಾಕೃತಿಕ ಕಾರಣಗಳಿ೦ದ ತನ್ನ ಪಾತ್ರವನ್ನು ಬದಲಾಯಿಸಿತು. ಹೀಗಾಗಿ ಬಹುತೇಕ ಪೂರ್ವಭಾಗದ ಕ್ಯಾನ್ಯನ್ ಗಳು ಆಗಲೇ ಆಕಾರ ಪಡೆದಿದ್ದವು. ಒ೦ದು ಬಲವಾದ ಊಹೆಯ ಪ್ರಕಾರ ೫ ಮಿಲಿಯನ್ ವರ್ಷಗಳ ಹಿ೦ದೆ ಕೊಲೊರೆಡೊ ನದಿ ಮತ್ತೊ೦ದು ನದಿಯೊ೦ದಿಗೆ ಸೇರಿ ತನ್ನ ಪಾತ್ರವನ್ನು ಗಣನೀಯವಾಗಿ ಬದಲಾಯಿಸಿತು. ಅ೦ದಿನಿ೦ದಲೂ ನದಿ ನೀರಿನ ನಿರ೦ತರ ಕೊರೆತ ಗ್ರ್ಯಾ೦ಡ್ ಕ್ಯಾನ್ಯನ್ ನ ಇ೦ದಿನ ರೂಪಕ್ಕೆ ತ೦ದಿಟ್ಟಿದೆ.

ಪಾರ್ಕ್ ಪ್ರವೇಶದ್ವಾರದಲ್ಲಿ ಕೊಟ್ಟ ಪರಿಚಯಪತ್ರದಲ್ಲಿ ಈ ವೈಜ್ನಾನಿಕ ವಿಷ್ಲೇಷಣೆ ಸ್ಥೂಲವಾಗಿ ವಿವರಿಸಲ್ಪಟಿದ್ದು, ಪ್ರ‍ಕೃತಿಯ ಈ ಸು೦ದರ ಸ್ವರೂಪದ ಹಿ೦ದಿನ ಕಾರಣಗಳನ್ನು ಅರ್ಥಮಾಡಿಕೊಳ್ಳುವುದರಿ೦ದ ಆ ಸ್ಥಳದ ರಸಗ್ರಹಣ ಸಾಧ್ಯವಾಯಿತು. ಅದರಲ್ಲಿಯ ಮ್ಯಾಪ್, ಬಸ್ ರೂಟ್ ಗಳ ಸಹಾಯದಿ೦ದ ಮು೦ದಿನ ೩ ತಾಸುಗಳಲ್ಲಿ ಗ್ರ್ಯಾ೦ಡ್ ಕ್ಯಾನ್ಯನ್ ನ್ನು ಅನೇಕ ಸ್ಥಳಗಳಿ೦ದ ವೀಕ್ಷಿಸಿದೆವು. ಪೊವೆಲ್ ಪಾಯಿ೦ಟ್ ನಿ೦ದ ಪೂರ್ವ ಕ್ಯಾನ್ಯನ್ ಗಳ ಮನಮೋಹಕ ದೃಶ್ಯವನ್ನು ಆಸ್ವಾದಿಸಿ, ಮೊಹಾವೆ ಪಾಯಿ೦ಟ್ ನಿ೦ದ ಕಾಣುವ ಕೊಲೊರೆಡೊ ನದಿಯ ಬಳುಕಿನ ಗಮನಕ್ಕೆ ಮನಸೋತೆವು. ಮು೦ದೆ ಹೋಪಿ ಪಾಯಿ೦ಟ್ ನಿ೦ದ ನಿಡಿದಾದ ಕೊರಕಲಿನಲ್ಲಿ ಬ೦ಡೆಗಲ್ಲುಳ ನಡುವೆ ಆರ್ಭಟಿಸುವ ಅದರ ಉಗ್ರರೂಪವನ್ನೂ ನೋಡಿದೆವು. ಗ್ರ್ಯಾ೦ಡ್ ಕ್ಯಾನ್ಯನ್ ವಿಲೇಜ್ ನ ಪೂರ್ವ ತುದಿಯಾದ ಡೆಸರ್ಟ್ ವ್ಯೂ ಸೂರ್ಯಾಸ್ತದ ವೀಕ್ಷಣೆ ಗೆ ಅಧ್ಭುತ ಸ್ಥಳವಾದರೆ, ಪಶ್ಚಿಮ ತುದಿಯಾದ ಮಾರಿಕೊಪಾ ಪಾಯಿ೦ಟ್ ಸೂರ್ಯೋದಯ ನೋಡಲು ಪ್ರಶಸ್ತವಾದ ಸ್ಥಳ.

ಈ ಮಹಾನ್ ಕಮರಿಗಳ ವೀಕ್ಷಣೆ ಎಷ್ಟು ವಿಶಿಷ್ಟ ಅನುಭವವೋ, ಅದರೊಳಗೇ ಹೊಕ್ಕು ಅವುಗಳ ಭವ್ಯತೆಯನ್ನು ಗ್ರಹಿಸುವುದು ಇನ್ನೂ ರೋಮಾ೦ಚನಕಾರಿ. ೧ - ೨ ಮೈಲುಗಲಷ್ಟು ಸಣ್ಣ ಹೈಕಿ೦ಗ್ ಗಳಿ೦ದ ಹಿಡಿದು ೨೫ ಮೈಲುಗಳ ಸೌಥ್ ರಿಮ್ ನಿ೦ದ ನಾರ್ಥ್ ರಿಮ್ ವರೆಗಿನ ೩ ದಿನಗಳ ಹೈಕಿ೦ಗ್ ಗೆ ಅಲ್ಲಿ ಅವಕಾಶವಿದೆ. ಸಮಯದ ಅಭಾವದ ಕಾರಣ ನಮಗೆ ಯಾವುದೇ ಹೈಕಿ೦ಗ್ ಗಳನ್ನು ಮಾಡಲಾಗಲಿಲ್ಲ.

ಅ೦ತೂ ಸೂರ್ಯಾಸ್ತದ ಹೊತ್ತಿಗೆ ಗ್ರ್ಯಾ೦ಡ್ ಕ್ಯಾನ್ಯನ್ ನ ಸೌ೦ದರ್ಯವನ್ನು ಹಲವಾರು ಸ್ಥಳಗಳಿ೦ದ ಸವಿದು ಮರಳಿ ತೂಸಯಾನ್ ಗೆ ಬರುವ ಹೊತ್ತಿಗೆ ಕತ್ತಲಾಗುತ್ತಿತ್ತು. ಅ೦ತಹ ಬೃಹತ್ ಕ೦ದರಗಳನ್ನು ಕೊರೆದ ನೀರಿನ ಅಸಮಾನ್ಯ ಶಕ್ತಿಯ ಬಗ್ಗೆ ವಿಸ್ಮಯಪಡುತ್ತಲೇ ಗ್ರ್ಯಾ೦ಡ್ ಕ್ಯಾನ್ಯನ್ ನ ಬಗ್ಗೆ ಮತ್ತಷ್ಟು ಮಾಹಿತಿ ಕಲೆಹಾಕುವ ಆಲೋಚನೆಯೊ೦ದಿಗೆ ಮರಳಿ ಬ೦ದೆವು.

Monday, 29 June 2009

ನೆವಾಡ ಜಲಪಾತಕ್ಕೆ ಹೈಕಿಂಗ್

ಜೂನ್ ಮೊದಲನೇ ವೀಕೆಂಡ್ ನಲ್ಲಿ ಕ್ಯಾಲಿಫೋರ್ನಿಯಾ ಕ್ಕೆ ಬರುತ್ತೇನೆ , ಯೋಸೆಮಿಟೆ ನ್ಯಾಷನಲ್ ಪಾರ್ಕ್ ಗೆ ಹೋಗಿಬರೋಣ ಎಂದು ಬಾಲ್ಟಿಮೋರ್ ನಿಂದ ರಾಘಣ್ಣ ಮೇಲ್ ಮಾಡಿದಾಗ ಆದ ಸಂತೋಷ ಅಷ್ಟಿಷ್ಟಲ್ಲ. ಬಾಲ್ಯದಲ್ಲಿ ಸ್ವಂತ ಅಣ್ಣ ತಂಗಿಯರಂತೆ ಒಟ್ಟಿಗೆ ಬೆಳೆದಿದ್ದು , ನಂತರ ವಿದ್ಯಾಭ್ಯಾಸಕ್ಕಾಗಿ ಬೇರೆ ಬೇರೆ ಕಡೆ ಹೋದರೂ, ಸಂಪರ್ಕ, ಭೇಟಿ ಕಡಿಮೆಯಾಗಿದ್ದರೂ ಆತ್ಮೀಯತೆ ಮಾತ್ರ ಅಷ್ಟೇ ಇತ್ತು. ಹಾಗಾಗಿ ಅವನು ಬರುತ್ತಿದ್ದಾನೆಂಬ ಸಂಭ್ರಮದ ಜೊತೆ ನನ್ನ ಬಹುದಿನದ ಆಸೆಯಾದ ಯೋಸೆಮಿಟೆ ಪ್ರವಾಸ ಕೈಗೂಡುತ್ತಿದೆ ಎಂಬ ಸಂತೋಷ. ಅದೃಷ್ಟಕ್ಕೆ ಮಹೇಶ್ ಗೂ ಆಫೀಸ್ ನಿಂದ ರಜೆ ಸಿಕ್ಕಿದ್ದು, ರಾಘಣ್ಣನ ಇಬ್ಬರು ಸ್ನೇಹಿತರಿಗೂ ಬರಲು ಅವಕಾಶವಾಗಿದ್ದು, ಬಾಡಿಗೆ ಕಾರ್ ಮತ್ತು ಉಳಿದುಕೊಳ್ಳಲು ಹೋಟೆಲ್ ಗಳ ಒಳ್ಳೆ ಡೀಲ್ ಸಿಕ್ಕಿದ್ದು ಎಲ್ಲವೂ ಅನುಕೂಲಕರವಾಗಿ ಪರಿಣಮಿಸಿತ್ತು.

ಯೋಸೆಮಿಟೆ ಪೂರ್ವ - ಮಧ್ಯ ಕ್ಯಾಲಿಫೋರ್ನಿಯಾ ದಲ್ಲಿರುವ ಒಂದು ಬೃಹತ್ ರಾಷ್ಟ್ರೀಯ ಉದ್ಯಾನವನ. ಸುಮಾರು ೭ ಲಕ್ಷ ಎಕರೆ ವಿಸ್ತೀರ್ಣದ ಈ ಪ್ರದೇಶದಲ್ಲಿ ಸುಮಾರು ೧೮ ಚದರ ಕಿ. ಮೀ. ವ್ಯಾಪ್ತಿಯ ಯೋಸೆಮಿಟೆ ಕಣಿವೆ ಇಲ್ಲಿಯ ಪ್ರಮುಖ ಪ್ರವಾಸೀ ತಾಣಗಳಲ್ಲಿ ಒಂದು. ಈ ಪ್ರದೇಶದ ೯೫% ಭಾಗವನ್ನು ಪ್ರಯತ್ನಪೂರ್ವಕವಾಗಿ ನೈಸರ್ಗಿಕವಾಗಿಯೇ ಉಳಿಸಿಕೊಳ್ಳಲಾಗಿದೆ. (Wilderness). ಸಮುದ್ರ ಮಟ್ಟಕ್ಕಿಂತ ೪೦೦೦ ಮೀ ತನಕ ಇರುವ ಸಿಯೆರ್ರಾ ಪರ್ವತಗಳ ತಪ್ಪಲಲ್ಲಿರುವ ಮನಮೋಹಕ ಯೋಸೆಮಿತೆ ಕಡಿದಾದ ಗ್ರಾನೈಟ್ ಹೆಬ್ಬಂಡೆಗಳಿಗೆ, ಜಲಪಾತಗಳಿಗೆ, ಸುಂದರ ಸರೋವರಗಳಿಗೆ, ಬೃಹತ್ ಸೆಕೋಯ ಮರಗಳ ತೋಪುಗಳಿಗೆ ಹಾಗೂ ಜೀವವೈವಿಧ್ಯತೆ ಗೆ ಹೆಸರುವಾಸಿ. ಯೋಸೆಮಿಟೆ ಜಲಪಾತ ಉತ್ತರ ಅಮೇರಿಕಾದ ಅತ್ಯಂತ ಎತ್ತರದ ಜಲಪಾತ. (೪೨೦೦ ಅಡಿ). ನಿರಂತರವಾಗಿ ತನ್ನ ಮೇಲ್ಮೈ ಸ್ವರೂಪವನ್ನು ಬದಲಾಯಿಸುತ್ತಲೇ ಇರುವ ಭೂಮಿಯ ಅಸಾಧಾರಣ ಬದಲಾವಣೆಗಳಿಗೆ ಇಲ್ಲಿಯ ವೈಶಿಷ್ಟ್ಯಗಳು ಜೀವಂತ ಉದಾಹರಣೆ. ಈ ಸಿಯೆರ್ರಾ ನೆವಾಡ ಪರ್ವತಗಳು ೧೦ ಮಿಲಿಯನ್ ವರ್ಷಗಳ ಹಿಂದೆ ಭೂಖಂಡ ಗಳ ಒತ್ತುವಿಕೆಯಿಂದ ಎದ್ದು ನಿಂತದ್ದು. ೧ ಮಿಲಿಯನ್ ವರ್ಷಗಳ ಹಿಂದೆ ಆದ ಹಿಮ ಯುಗದಲ್ಲಿ ಸಂಗ್ರಹವಾದ ಮಂಜುಗಡ್ದೆ ಹಾಗೂ ಹಿಮನದಿಗಳು ಆಗಾಧ ಕೊರಕಲು - ಕಣಿವೆಗಳನ್ನು ರಚಿಸಿವೆ. ಅತ್ಯಂತ ಪ್ರಸಿದ್ಧವಾದ Half Dome ಕೂಡ ಇಂಥದ್ದೇ ನೈಸರ್ಗಿಕ ಪ್ರಕ್ರಿಯೆಗಳಿಂದ ಕಡೆಯಲ್ಪಟ್ಟಿದ್ದು. ಅದರ ತುದಿ ಪ್ರಪಂಚದ ಒಂದು ಅತೀ ಕಷ್ಟದ ಪರ್ವತಾರೋಹಣ.

ಅಲ್ಲಿರುವ ಪ್ರತಿಯೊಂದು ಆಕರ್ಷಣೆಯ ಹಿಂದೆ ಸ್ವಾರಸ್ಯಕರವಾದ ಭೌಗೋಳಿಕ ಚರಿತ್ರೆ ಇದೆ. ಆದರೆ ಅವೆಲ್ಲವುಗಳ ವಿವರಣೆ ನನ್ನ ಈ ಪುಟ್ಟ ಬ್ಲಾಗ್ ಪೋಸ್ಟ್ ನ ಮಿತಿಗೆ ಮೀರಿದ್ದು. ನಾನು ಈಗ ಹೇಳಲು ಹೊರಟಿದ್ದು, ನನಗೆ ಯೋಸೆಮಿಟೆ ಯಲ್ಲಿ ತುಂಬ ಇಷ್ಟವಾದ ಜಾಗಗಳಲ್ಲಿ ಒಂದಾದ ನೆವಾಡ ಜಲಪಾತ. ಅದರಲ್ಲೂ ಐದೂವರೆ + ಐದೂವರೆ ಕಿಲೋಮೀಟರು ಗಳ ಪುಟ್ಟ ಹೈಕಿಂಗ್. ಮೊದಲೇ ನಾವಿಬ್ಬರು ಅತ್ಯಂತ ಇಷ್ಟಪಡುವ ಚಟುವಟಿಕೆಗಳಲ್ಲಿ ಒಂದು ಈ ತರಹದ ಹೈಕಿಂಗ್ ಗಳು. ಮಿಸ್ಟ್ ಟ್ರೈಲ್ ನಿಂದ ಶುರುವಾದ ನಮ್ಮ ಹೈಕಿಂಗ್ ಕಲ್ಲುಬಂಡೆಗಳ ನಡುವೆ, ಹಸಿರು ಕಾಡಿನ ಮಧ್ಯೆ , ದಾರಿಯುದ್ದಕ್ಕೂ ಮೆರ್ಸೆಡ್ ನದಿ ನೀರಿನ ಝರಿಗಳ ಜುಳುಜುಳು ನಾದ, ಹಕ್ಕಿಗಳ ಕಲರವದೊಂದಿಗೆ ಇನ್ನೂ ಆಪ್ಯಾಯಮಾನವಾಗಿತ್ತು. ಅಲ್ಲಲ್ಲಿ ಕುಡಿಯುವ ನೀರು, ಶೌಚಾಲಯಗಳ ವ್ಯವಸ್ಥೆ ಪ್ರವಾಸಿಗರಿಗೆ ಬಹಳ ಅನುಕೂಲಕರವಾಗಿತ್ತು. ನಿಧಾನಕ್ಕೆ ಮೇಲೆಮೇಲೆ ಹತ್ತುತ್ತ ಬರುತ್ತಿದ್ದಂತೆ ಜಲಪಾತದ ಭೋರ್ಗರೆಯುವ ಸದ್ದು ಕೇಳತೊಡಗಿತು.

ಮಧ್ಯೆ ವರ್ನಲ್ ಜಲಪಾತದವರೆಗೂ ಸುಲಭವಾಗಿದ್ದ ಹೈಕಿಂಗ್ ನಿಧಾನ ಸ್ವಲ್ಪ ಕಡಿದಾಗುತ್ತಾ ಬಂತು. ಆ ನಂತರದ ಹಾದಿ ತುಂಬ ಕಿರಿದಾದದ್ದು. ಬೃಹತ್ ಬಂಡೆಗಳ ಮೇಲೇ ಮೆಟ್ಟಿಲುಗಳನ್ನು ಕಡೆದು, ಪಕ್ಕಕ್ಕೆ ಆಧಾರದ ಬೇಲಿಗಳನ್ನೂ ಹಾಕಿ ಸುರಕ್ಷಿತವಾಗಿಸಿದ್ದರು. ನಾನು ಬೆರಗಾಗಿದ್ದು ಅಲ್ಲಿಯ ಪ್ರವಾಸಿಗರನ್ನು ನೋಡಿ. ಅಷ್ಟೇನೂ ಸುಲಭವಲ್ಲದ ಈ ಮಾರ್ಗದಲ್ಲಿ , ೫೦ ವರ್ಷಕ್ಕೂ ಮೇಲ್ಪಟ್ಟವರು ಗಣನೀಯ ಸಂಖ್ಯೆಯಲ್ಲಿರುವುದು! ಅಷ್ಟೇ ಅಲ್ಲ, ೫ ವರ್ಷಕ್ಕಿಂತ ಕೆಳಗಿನ ಮಕ್ಕಳೂ ಸಹ! ಸಾಹಸೀ ಪ್ರವೃತ್ತಿ ಇವರ ವ್ಯಕ್ತಿತ್ವದ ಅವಿಭಾಜ್ಯ ಗುಣ. ಆಗ ಅನ್ನಿಸಿತು, ನಾವು ನಮ್ಮ ಮಕ್ಕಳ ಸಹಜ ಚೈತನ್ಯ - ಹುಮ್ಮಸ್ಸನ್ನು ಹರಿಯಬಿಡುವುದು ಕಡಿಮೆ. ೫ ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ , ನಾವು ಈ ತರಹದ ಚಟುವಟಿಕೆ ಗಳಿಗೆ ಎಷ್ಟು ಪ್ರೋತ್ಸಾಹ ಕೊಡುತ್ತೇವೆ ಹೇಳಿ? ಸಿಟಿಯಲ್ಲಿ ಬೆಳೆದ ಎಷ್ಟೋ ಮಕ್ಕಳು ಹಳ್ಳಿಯ ಅಜ್ಜನ ಮನೆಗೆ ಬಂದಾಗ ತೋಟಕ್ಕೂ ಸಹ ಕರೆದುಕೊಂಡು ಹೋಗದ ಪೋಷಕರಿದ್ದಾರೆ . ಇನ್ನು ಅವರಷ್ಟಕ್ಕೆ ಗುಡ್ಡ - ಬೆಟ್ಟಗಳನ್ನು ಹತ್ತಲು ಬಿಡುವುದು ದೂರದ ಮಾತು. ನಾನಂತೂ ೧ ವರ್ಷದ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು (ಅಕ್ಷರಶಃ ಬೆನ್ನಿಗೆ ಕಟ್ಟಿಕೊಂಡು!) ಹತ್ತುತ್ತಿರುವ ಮಹಿಳೆಯರನ್ನೂ ನೋಡಿದೆ. ಯಾವ ಕಾರಣಗಳೂ ಸಹ ಇವರ ಅದಮ್ಯ ಹುಮ್ಮಸ್ಸಿನ ಜೀವನ ಶೈಲಿಗೆ ಅಡ್ಡಿಯಾಗುವುದಿಲ್ಲ ಎಂಬ ಅಚ್ಚರಿಭರಿತ ಮೆಚ್ಚುಗೆ ವ್ಯಕ್ತಪಡಿಸುತ್ತಾ ಮುಂದುವರೆದೆವು.
ಜಲಪಾತದ ನೀರಿನ ಸಿಂಚನ ನಮ್ಮ ಆಯಾಸವನ್ನು ಪರಿಹರಿಸಿತ್ತು. ಜಲಪಾತದ ನೆತ್ತಿಯನ್ನು ತಲುಪಿದಾಗ ಆಗಲೇ ಸುಮಾರು ತೊಯ್ದು ಹೋಗಿದ್ದೆವು. ಮನಸೂರೆಗೊಳ್ಳುವ ಪರ್ವತ - ಕಣಿವೆ ಗಳ ಹಿನ್ನೆಲೆಯಲ್ಲಿ ಎಲ್ಲಿಂದಲೋ ಹರಿದುಬರುವ ಪ್ರಶಾಂತ ಮರ್ಸಿಡ್ ನದಿ ಆರ್ಭಟಿಸುವ ಜಲಪಾತಕ್ಕೆ ರೂಪಾಂತರ ಹೊಂದುವ ದೃಶ್ಯ ಎಲ್ಲವನ್ನೂ ಮರೆಸಿತ್ತು. ಈ ಜಲಪಾತ ಉದ್ದಕ್ಕೂ ಒಂದೇ ಹಂತಕ್ಕೆ ಧುಮುಕುವ ಜಲರಾಶಿಯಂತೆ ಅಲ್ಲ. ಮೂರನೇ ಒಂದು ಭಾಗ ಮಾತ್ರ ಆ ತರಹದ ಫ್ರೀ ಫಾಲ್ . ನಂತರ ದೊಡ್ಡ ಇಳಿಜಾರು ಕಲ್ಲು ಬಂಡೆಯ ಮೇಲೆ ಬಿದ್ದು ಹರಿಯುವ ನೀರಿನಿಂದಾಗಿ ಜಲಪಾತ ಬಾಗಿದಂತಿದೆ. ರಭಸದಿಂದ ಬಂಡೆಯ ಮೇಲೆ ಬೀಳುವ ನೀರು ತನ್ನ ಸುತ್ತಲೂ ದೊಡ್ಡ ಮಂಜಿನ ಮೋಡವನ್ನೇ ಸೃಷ್ಟಿಸುತ್ತದೆ. ಜಲಪಾತದ ಅನ್ವರ್ಥನಾಮಕ್ಕೆ ಇದೇ ಕಾರಣ. ಸ್ಪ್ಯಾನಿಶ್ ಭಾಷೆಯಲ್ಲಿ ನೆವಾಡ ಎಂದರೆ ಹಿಮಾವೃತ ಎಂದರ್ಥ.

ಆಗಾಗಲೇ ಸಂಜೆಯಗುತ್ತ ಬಂದಿದ್ದರಿಂದ ನಾವು ಹೆಚ್ಚು ಹೊತ್ತುಅಲ್ಲಿ ಕಳೆಯಲಾಗಲಿಲ್ಲ. ಒಂದಷ್ಟು ಫೋಟೋ ಕ್ಲಿಕ್ಕಿಸಿ, ಮತ್ತೊಮ್ಮೆ ಇಲ್ಲಿಗೆ ಬರಲೇಬೇಕೆಂಬ ನಿಶ್ಚಯದೊಂದಿಗೆ ಮರಳಿ ಹೊರಟೆವು. ೬ ತಾಸುಗಳ ಪ್ರಯಾಣ ನಮ್ಮ ಮುಂದಿತ್ತಾದರೂ, ಮಾತನಾಡಲು, ಹಂಚಿಕೊಳ್ಳಲು ಬೇಕಾದಷ್ಟು ಅನುಭವ, ಅನಿಸಿಕೆ ಮತ್ತು ನೆನಪುಗಳಿತ್ತು. ಮುಂದಿನ ೨ ದಿನಗಳಲ್ಲಿ ಮತ್ತಷ್ಟು ಸ್ಮರಣೀಯ ಕ್ಷಣಗಳನ್ನು ನಿರೀಕ್ಷೆ ಮಾಡುತ್ತಾ ಮನೆಗೆ ಬಂದೆವು.

Thursday, 14 May 2009

ಸುಖಾಂತ್ಯ..

ಇದು ನನ್ನ ಬ್ಲಾಗ್ ನ ಮೊದಲನೆ ಬರವಣಿಗೆಯ ಉತ್ತರಾರ್ಧ. ತಲೆಬರಹವೇ ಹೇಳುತ್ತದೆ ನಮಗೆ ಅಪಾರ್ಟ್ಮೆಂಟ್ ಸಿಕ್ಕಿತು ಎಂದು. ಬಾಡಿಗೆ ಮನೆ ಹುಡುಕಿದ್ದನ್ನು ಇಷ್ಟುದ್ದ ಕಥೆಯಾಗಿ ಬರೆದ ಮೇಲೆ ಅದನ್ನು ಪೂರ್ಣಗೊಳಿಸುವುದು ಅನಿವಾರ್ಯ ಎನ್ನುವುದಕ್ಕಿಂತಲೂ ಅವಶ್ಯಕ ಎಂದುಕೊಳ್ಳುತ್ತೇನೆ. ಪ್ರತೀ ಕಥೆಗೆ ಸುಖಾಂತ್ಯ ಬಯಸುವುದು ನಮ್ಮ ಸಾಮಾನ್ಯ ಮನೋಭಾವ. ನಾನು ಈ ಅನುಭವವನ್ನು ಕಹಿ ಎಂದು ಪರಿಗಣಿಸಿಲ್ಲವಾದರೂ ಓದುವಾಗ ಎಲ್ಲೋ ಒಂದು ಕಡೆ ಮನಸ್ಸು ಇದನ್ನು ಟ್ರಾಜಿಡಿ ಎಂದು ಪರಿಭಾವಿಸಿಬಿಟ್ಟಿರುತ್ತದೆ. ಹೇಗೂ ಮನೆ ಸಿಕ್ಕಿತಲ್ಲ? ಅದೂ ನಮಗೆ ಬೇಕಾದಂಥದ್ದು! ಇನ್ನು ಕೂಡಾ ಈ ಸಂತೋಷವನ್ನು ನಾನು ನಿಮ್ಮ ಜೊತೆ ಹಂಚಿಕೊಳ್ಳದಿದ್ದರೆ ಈ ಅನುಭವವನ್ನು ನಾನು ಸ್ವಲ್ಪ ಹೆಚ್ಚೇ ಋಣಾತ್ಮಕವಾಗಿ ತೆಗೆದುಕೊಂಡಂತೆ ಆಗುತ್ತದೆ.

ಇಲ್ಲಿ ಅಮೆರಿಕದಲ್ಲಿ ಸದ್ಯ ಆರ್ಥಿಕ ಬಿಕ್ಕಟ್ಟಿನ ತೀವ್ರತೆಯ ಏರುವಿಕೆ ಕಡಿಮೆಯಗಿರುವುದು ಸಮಾಧಾನದ ಸಂಗತಿ. ಆದರೂ ಪರಿಸ್ಥಿತಿಯಲ್ಲಿ ಗಣನೀಯ ಸುಧಾರಣೆ ಏನೂ ಇಲ್ಲ. ಅಪಾರ್ಟ್ಮೆಂಟ್ ಗಳ ರೇಟು ಇಳಿದದ್ದು ಹಾಗೆಯೆ ಇದ್ದಿದ್ದು ನಮಗೆ ಅನುಕೂಲವಾಯಿತು. ಟ್ರೈನ್ , ಸೂಪರ್ ಮಾರ್ಕೆಟ್ ಎಲ್ಲ ಹತ್ತಿರವಿರುವ ಜಾಗದಲ್ಲೇ ಮನೆ ಸಿಕ್ಕಿತು. ನಮ್ಮ ಆಫೀಸ್ ಗಳು ಹತ್ತಿರವಲ್ಲದಿದ್ದರೂ ತೀರಾ ದೂರವಲ್ಲ. ಇದು ಪ್ರತಿ ತಿಂಗಳೂ ಮುಂದುವರೆಯುವಂಥಹ ಲೀಸ್ ಆಗಿದ್ದರಿಂದ ಕೆಲಸದ ಅವಧಿಯ ಅನಿಶ್ಚಿತತೆ ಈಗ ನಮಗೆ ದೊಡ್ಡ ಸಮಸ್ಯೆಯಲ್ಲ. ಇನ್ನು ಅನಿಶ್ಚಿತತೆಯ ಜೊತೆಗೇ ಬದುಕುವುದು ನಾವು ಜೀವನದಲ್ಲಿ ರೂಧಿಸಿಕೊಳ್ಳಲೇಬೇಕಾದ ಅಂಶ ಅಲ್ಲವೇ? ಒಟ್ಟಿನಲ್ಲಿ ಬೆಟ್ಟದಂತೆ ಕಂಡ ಸಮಸ್ಯೆ ಮಂಜಿನಂತೆ ಕರಗಿತು. ಪ್ರತೀ ಕಾರ್ಮೋಡಕ್ಕೂ ಬೆಳ್ಳಿಯ ಅಂಚು ಇದ್ದಂತೆ ತಾಳ್ಮೆ ಮತ್ತು ಸಕಾರಾತ್ಮಕ ಮನೋಭಾವ ಇದ್ದರೆ ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ ಎಂಬುದು ಸುಳ್ಳಲ್ಲ.

Sunday, 22 March 2009

ಅಮೆರಿಕದಲ್ಲಿ ಬಾಡಿಗೆ ಮನೆ ಹುಡುಕುತ್ತಿದ್ದಾಗ...

ಅಮೇರಿಕಾ ಎಂದರೆ ಸೌಕರ್ಯಗಳಿಗೆ ಹೆಸರಾದ ದೇಶ ಎಂಬುದರಲ್ಲಿ ಎರಡು ಮಾತಿಲ್ಲ , ನಿಜ. ಆದರೆ ಇಲ್ಲಿ ಬದುಕು ಸುಲಭವಲ್ಲ. ಸುಖ ಸೌಲಭ್ಯಗಳು ಹೆಚ್ಚಾದಷ್ಟೂ ಅದಕ್ಕೆ ತೆರಬೇಕಾದ ಬೆಲೆಯೂ ಹೆಚ್ಚಿರುತ್ತದೆ. ಅದುಹಣದ ರೂಪದಲ್ಲೇ ಇರಲಿ ಅಥವಾ ನಾವು ವ್ಯಯಿಸಬೇಕಾದ ಸಮಯ, ಶ್ರಮ, ಸಹನೆಯೇ ಆಗಿರಲಿ, ಒಂದಷ್ಟು ನೆಮ್ಮದಿಯಂತೂ ಖಂಡಿತ ಕಳೆದುಕೊಂಡಿರುತ್ತೇವೆ. ಸರಿ, ಇವೆಲ್ಲ ಜೀವನದ ಭಾಗವೇ ಅಲ್ಲವೇ ಎಂಬ ಸಮಾಧಾನದ ಜೊತೆ ಬದುಕೋಣ ಎಂದುಕೊಂಡರೂ ಕೆಲವೊಂದು ಸಮಯದಲ್ಲಿ ಪರಿಸ್ಥಿತಿ ನಮ್ಮ ಉತ್ಸಾಹ ಪ್ರಯತ್ನಗಳ ಜೊತೆ ಸಹಕರಿಸುವುದಿಲ್ಲ. ಇಂತಹದ್ದೊಂದು ಅನುಭವ ನನಗೆ ಅಮೆರಿಕದಲ್ಲಿ ಬಾಡಿಗೆ ಮನೆ ಹುಡುಕುವಾಗ ಆಯಿತು. ಈಗ ವಿಶ್ವದಾದ್ಯಂತ ಚರ್ಚಿತವಾಗುವ ಅಮೇರಿಕಾ ದ ಆರ್ಥಿಕ ಹಿಂಜರಿತದ ಬಿಸಿ ಪರೋಕ್ಷವಾಗಿ ನಾನು ಅನುಭವಿಸಿದ ಬಗ್ಗೆ ಇದೆ ನನ್ನ ಈ ಪ್ರಪ್ರಥಮ ಬರವಣಿಗೆ.

ಒಂದು ವರ್ಷದ ಹಿಂದೆ ಮಹೇಶ್ ಇಲ್ಲಿಗೆ ಬಂದಾಗ ವಾಸಿಸಲು ಸಿಂಗಲ್ ಬೆಡ್ ರೂಮ್ ಮನೆಯನ್ನು ಬಾಡಿಗೆಗೆ ಹುಡುಕುತ್ತಿದ್ದರು. ಇಲ್ಲಿ ಅಪಾರ್ಟ್ಮೆಂಟ್ ಎಂದೆ ಕರೆಯಲಾಗುವ ಬಾಡಿಗೆ ಮನೆಗಳಿಗೆ ಇಲ್ಲಿ, ವಿಶೇಷವಾಗಿ 'ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯ ' ದಲ್ಲಿ ವಿಶೇಷ ಬೇಡಿಕೆ. ಪ್ರಪಂಚದ ಸಿಲಿಕಾನ್ ವ್ಯಾಲಿ ಯಲ್ಲಿ ವಾಸಿಸುತ್ತಿದ್ದೇವೆ ಎಂಬ (ಉಪಯೋಗಕ್ಕೆ ಬಾರದ) ಹೆಗ್ಗಳಿಕೆ ಬಿಟ್ಟರೆ ಇಲ್ಲಿಯ ದುಬಾರಿ ಜೀವನ ಶೈಲಿ ಒಂದು ಥರದ ಬಿಸಿ ತುಪ್ಪ. ಅದೂ ಆಗ ಅಮೆರಿಕದಲ್ಲಿ ಆರ್ಥಿಕ ಬಿಕ್ಕಟ್ಟು ಆಗಷ್ಟೇ ತಲೆದೋರಿತ್ತು. ಬಹಳ ಜನರು ತಮ್ಮ ಸ್ವಂತ ಮನೆಗಳನ್ನು ಮಾರಿ ಅಪಾರ್ಟ್ಮೆಂಟ್ ಗಳ ಮೊರೆ ಹೋಗುತ್ತಿದ್ದ ಸಮಯ. ಅವುಗಳ ಬೆಲೆ ಗಗನಕ್ಕೇರಿತ್ತು. ಈ ಮಧ್ಯೆ ಒಳ್ಳೆಯ ರೆಂಟ್ ಹಿಸ್ಟರಿ ಇಲ್ಲದೆ ಮನೆ ಕೊಡುವುದಿಲ್ಲ ಎಂಬ ನಿಯಮ ಅಪಾರ್ಟ್ಮೆಂಟ್ ಮಾಲೀಕರದ್ದು. ಅಮೆರಿಕಕ್ಕೆ ಬರೀ ೧ ವಾರ ಹಳಬರಾಗಿದ್ದ ಮಹೇಶ್ ಇವೆಲ್ಲವುದರ ನಡುವೆ ಹೈರಾಣಾಗಿದ್ದರು.

ಅಂತೂ ಒಂದು ಹೆಸರಾಂತ ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ ನಲ್ಲಿ ೧ ವರ್ಷದ ಲೀಸ್ ಗೆ ಪುಟ್ಟ ಮನೆ ಸಿಕ್ಕಿದಾಗ ಹೋದ ಜೀವ ಮರಳಿ ಬಂದಂತಾಗಿತ್ತು. ಸುಂದರವಾದ ಕೊಳ , ಬಾತುಕೋಳಿಗಳು, ಕೈದೋಟ ಎಲ್ಲ ಇರುವಂತ ಮನೋಹರ ವಾತಾವರಣದಲ್ಲಿ ಒಂದು ವರ್ಷ ಕಳೆದದ್ದೇ ಗೊತ್ತಾಗಲಿಲ್ಲ. ಮತ್ತೆ ಅಪಾರ್ಟ್ಮೆಂಟ್ ಹಂಟ್ ಶುರುವಾಯಿತು. ಹೇಗೂ ಈಗ ಈ ಊರಿನ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಪರಿಚಯ ಚೆನ್ನಾಗಿದೆ, ಕ್ರೆಡಿಟ್ ಹಿಸ್ಟರಿ, ರೆಂಟ್ ಹಿಸ್ಟರಿ ಎಲ್ಲವೂ ಕೈಯಲ್ಲಿವೆ, ಮನೆ ಸಿಕ್ಕುವುದೇನು ಕಷ್ಟವಿಲ್ಲ ಎಂಬ ಭ್ರಮೆ ಹರಿದದ್ದು ಮನೆ ಹುಡುಕಲು ಶುರು ಮಾಡಿದಾಗ. ಈ ಸಮಯದಲ್ಲಿ ಅಮೇರಿಕಾದ ಆರ್ಥಿಕ ಬಿಕ್ಕಟ್ಟು ತೀವ್ರವಾಗಿತ್ತು. ಸಾವಿರಾರು ಜನರು ಕೆಲಸ ಕಳೆದುಕೊಂಡಿದ್ದರು. ಮುಂಚಿನಂತೆ ಅನುಕೂಲಕ್ಕೆ ತಕ್ಕಂತೆ ಮನೆಗಳನ್ನು ಬದಲಾಯಿಸುವುದನ್ನು ಗಣನೀಯವಾಗಿ ಕಡಮೆ ಮಾಡಿದ್ದರು. ಅಪಾರ್ಟ್ಮೆಂಟ್ ಗಳ ರೇಟು ಇಳಿದಿತ್ತು. ಅದರೂ ಅಪಾರ್ಟ್ಮೆಂಟ್ ಮಾಲೀಕರು ಬಾಡಿಗೆದಾರರ ಬಗ್ಗೆ ಮೊದಲಿಗಿಂತ ನಾಲ್ಕು ಪಟ್ಟು ಎಚ್ಚರಿಕೆಯಿಂದ ವ್ಯವಹಾರ ಮಾಡುತ್ತಿದ್ದರು. ಬಾಡಿಗೆದಾರರ ಆರ್ಥಿಕ ಪರಿಸ್ಥಿತಿ, ಯಾವ ತರಹದ ಉದ್ಯೋಗ ಇವೆಲ್ಲದರ ಆಧಾರದ ಮೇಲೆ ಲೀಸ್ ಕೊಡಬೇಕೇ ಬೇಡವೇ ನಿರ್ಧರಿಸುತ್ತಿದ್ದರು. ನಮಗಂತೂ ಒಂದು ಕಡೆ ಗುತ್ತಿಗೆದಾರರು (ಸಾಫ್ಟ್ವೇರ್ ವಲಯದಲ್ಲಿ) ಮತ್ತು ವಿಜ್ಞಾನಿಗಳಿಗೆ ಮನೆ ಬಾಡಿಗೆಗೆ ಕೊಡುವುದಿಲ್ಲ ಎಂಬ ಉತ್ತರ ಸಿಕ್ಕಿತು! ನಮ್ಮ ಹತ್ತಿರ ಕಾರು ಇಲ್ಲದ ಕಾರಣ ನಮಗೆ ಸಾರ್ವಜನಿಕ ಸಾರಿಗೆ ಸಂಪರ್ಕಗಳಿಗೆ ಹತ್ತಿರವಾಗುವ ಮನೆ ಬೇಕಿತ್ತು. ಅಪಾರ್ಟ್ಮೆಂಟ್ ಗಳಿಗೆ ಬೇಡಿಕೆ ಅಷ್ಟು ಇಲ್ಲದ ಕಾರಣ ಅಂಥಹ ಮನೆ ಸಿಗುವುದು ಅಷ್ಟೇನೂ ಕಷ್ಟವಿಲ್ಲದಿದ್ದರೂ ನಮಗೆ ಮನೆ ದುರ್ಲಭವಾಗಿದ್ದು ನಮಗಿದ್ದ ಮತ್ತೊಂದು ಮಿತಿ - ಮಹೇಶ್ ರ ಪ್ರಾಜೆಕ್ಟ್ ನ ಅನಿಶ್ಚಿತತೆ. ಎಂದೋ ಮುಗಿಯಬೇಕಾಗಿದ್ದ ಪ್ರಾಜೆಕ್ಟ್ ಪ್ರತೀ ತಿಂಗಳೂ ಮುಂದಿನ ತಿಂಗಳಿಗೆ ಹಾರುತ್ತಿತ್ತು. ಹೆಚ್ಚೆಂದರೆ ಇನ್ನು ೩ ತಿಂಗಳು ಇಲ್ಲಿ ಇರಬೇಕಾಗುತ್ತದೆ ಎಂಬ ಸತ್ಯವನ್ನು ಮುಂದಿಟ್ಟುಕೊಂಡು ೬ ತಿಂಗಳ ಅಥವಾ ೧ ವರ್ಷದ ಲೀಸ್ ಗೆ ಸಹಿ ಮಾಡುವ ಧೈರ್ಯದ ಪ್ರಶ್ನೆಯೇ ಇರಲಿಲ್ಲ, ಅದಕ್ಕಿಂತ ಕಡಿಮೆ ಅವಧಿಯ ಲೀಸ್ ಕೊಡಲು ಯಾರೂ ಒಪ್ಪುತ್ತಿರಲಿಲ್ಲ. ಇಲ್ಲಿ ಅವಧಿಗೆ ಮುಂಚೆ ಮನೆ ಬಿಡುವ ಅಥವ ಲೀಸ್ ಒಪ್ಪಂದವನ್ನು ಮುರಿಯುವ ಸಾಹಸ ಮಾಡಲು ಸ್ವಲ್ಪ ಹೆಚ್ಚೇ ಅನ್ನಿಸುವಷ್ಟು ದಂಡವನ್ನು ತೆರಲು ಸಿಧ್ಧರಿರಬೇಕು. ಇರುವ ಒಂದೇ ಒಂದು ಪರಿಹಾರ ಎಂದರೆ ತಿಂಗಳು ತಿಂಗಳಿಗೆ ಮುಂದುವರೆಯುವ ಲೀಸ್ ಹುಡುಕುವುದು. ಅದಂತೂ ದುಸ್ತರವೇ ಸರಿ.

ಪ್ರತಿದಿನ ೨-೩ ತಾಸು ಕಂಪ್ಯೂಟರ್ ಮುಂದೆ ಕೂರುವುದು, ಅಪಾರ್ಟ್ಮೆಂಟ್ ಗಳ ಜಾಹೀರಾತಿಗಾಗಿ ಹುಡುಕುವುದು, ದಿನಕ್ಕೆ ೧೦-೧೨ ಈ-ಮೇಲ್ , ೮-೧೦ ಫೋನ್ ಕಾಲ್ - ಇದೊಂದು ತರಹದ ದಿನಚರಿಯೇ ಆಯಿತು. ಕಡಿಮೆ ಅವಧಿಯ ಲೀಸ್ ಎಂದ ಕೂಡಲೇ ಸಾರಿ, ಕೊಡುವುದಿಲ್ಲ ಎಂಬ ನಿರಾಶಾದಾಯಕ ಉತ್ತರ. ಒಂದಿಬ್ಬರು ತಿಂಗಳು-ತಿಂಗಳಿನ ಲೀಸ್ ಗೆ ಒಪ್ಪಿದರೂ ಕಡಿಮೆ ಎಂದರೆ ೫ -೬ ತಿಂಗಳು ಇರಬೇಕಾಗುತ್ತದೆ ಎಂದರು. ಸುಮ್ಮನೆ ಹೂಂ ಎಂದು ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ನೈತಿಕ ಪ್ರಜ್ಞೆ ಅಡ್ಡ ಬರುತ್ತಿತ್ತು. ಛಲ ಬಿಡದೇ ನಮ್ಮ ಹುಡುಕಾಟ ಮುಂದುವರೆಸುವುದನ್ನು ಬಿಟ್ಟು ಇನ್ನೇನೂ ಮಾಡಲು ಸಾಧ್ಯವಿರಲಿಲ್ಲ. ಇನ್ನು ಅಡುಗೆ ಮನೆ ಇರುವಂಥಹ ಹೋಟೆಲ್ ರೂಮುಗಳು ಸಿಗುತ್ತವೆ. ಮೋಟೆಲ್ ಅಥವ ಸ್ಟುಡಿಯೊ ಗಳು. ಆದರೆ ಅಂಥಹ ಇಕ್ಕಟ್ಟಾದ ಒಂದೇ ಒಂದು ರೂಮಿನಲ್ಲಿ ತಿಂಗಳುಗಟ್ಟಲೆ ಇರುವುದು ಕಷ್ಟ. ಆದರೂ ಕಡೆಯ ಆಯ್ಕೆಯಾಗಿ ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡಿದ್ದೆವು.

ಕೊನೆಗೂ ಒಬ್ಬ ಆಪದ್ಭಾಂದವ ಸಿಕ್ಕೇ ಬಿಟ್ಟ. ತಿಂಗಳ ಲೀಸ್ ಗೆ ಒಪ್ಪಿದ್ದ, ಅದೂ ಇಂತಿಷ್ಟು ಕಾಲ ಇರಲೇಬೇಕು ಎಂಬ ಷರತ್ತು ಏನೂ ಇಲ್ಲದೆ! ಸರಿ. ನಾವು ಅಪಾರ್ಟ್ಮೆಂಟ್ ನೋಡಲು ಹೋದೆವು. ಅದು ಇದ್ದ ಜಾಗವಂತೂ ನಮಗೆ ಹೇಳಿ ಮಾಡಿಸಿದ ಹಾಗಿತ್ತು! ಸೂಪರ್ ಮಾರ್ಕೆಟ್, ಬಸ್, ಟ್ರೈನ್ , ಲೈಬ್ರರಿ, ನಮ್ಮಿಬ್ಬರ ಆಫೀಸ್ ಎಲ್ಲದಕ್ಕೂ ಹತ್ತಿರ. ಬಾಡಿಗೆಯೂ ಹೆಚ್ಚಿಲ್ಲ. ಬಹಳ ಹುಮ್ಮಸ್ಸಿನಿಂದ ಒಳಗೆ ಹೋದರೆ ಇಬ್ಬರಿಗೂ ಭ್ರಮನಿರಸನ! ಗೋಡೆ , ಕಿಟಕಿ , ಕಾರ್ಪೆಟ್ ಎಲ್ಲವೂ ಕೊಳಕಾಗಿತ್ತು, ನೋಡಿದ ಕೂಡಲೇ ಬೇಡ ಹೇಳುವ ಹಾಗಿತ್ತು. ಯುಎಸ್ ಲ್ಲೂ ಈ ತರಹದ ಮನೆಗಳು ಇರುತ್ತವೆ ಎಂದು ಗೊತ್ತಾಗಿದ್ದೆ ಆಗ. ಬಂದ ದಾರಿಗೆ ಸುಂಕವಿಲ್ಲ ಎಂದು ಮರಳಿ ಹೊರಟೆವು.

ಅದೇ ಅಪಾರ್ಟ್ಮೆಂಟ್ ಎದುರಿಗೆ ಒಂದು ಪುಟ್ಟ , ಸುಂದರ , ಸ್ವತಂತ್ರ ಮನೆಯಿತ್ತು. ಅದರ ಎದುರು ತೆಗೆಯದೆ ಬಿಟ್ಟ ದಿನಪತ್ರಿಕೆಗಳು , ಅಂಗಳದಲ್ಲಿ ಗುಡಿಸದೇ ಬಿಟ್ಟ ಎಲೆಯುದುರು ಎಲ್ಲ ಹೇಳುತ್ತಿದ್ದವು, ಮನೆ ಖಾಲಿ ಇದೆ ಎಂದು. ಇಂಥ ಒಳ್ಳೆ ಜಾಗದಲ್ಲಿ ಇಷ್ಟು ಸುಂದರವಾದ ಗೂಡನ್ನು ಹೊಂದಲು ಅದೃಷ್ಟ ಬೇಕು ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾ ಮನೆಗೆ ಬಂದೆವು.

ಬೆಳಿಗ್ಗೆ ಎದ್ದಾಗ ಒಂದು ಅಚ್ಚರಿ ಕಾದಿತ್ತು. ಅಪಾರ್ಟ್ಮೆಂಟ್ ಸಲುವಾಗಿ ಕಳುಹಿಸಿದ ಈ-ಮೇಲ್ ಒಂದಕ್ಕೆ ಉತ್ತರ ಬಂದಿತ್ತು, ನಾವು ಹಿಂದಿನ ದಿನ ನೋಡಿ ಅಸೂಯೆಪಟ್ಟಿದ್ದ ಮನೆಯ ಮಾಲೀಕರಿಂದ! ತವೊಬ್ಬರು ಪಾದ್ರಿ, ದೇವರ ಕೆಲಸಕ್ಕೋಸ್ಕರ ಸದ್ಯ ಆಫ್ರಿಕದಲ್ಲಿರುವುದರಿಂದ ಮನೆಗೆ ಬಾಡಿಗೆದಾರರನ್ನು ಹುಡುಕುತ್ತಿರುವುದಾಗಿ ಬರೆದಿತ್ತು. 'ನನಗೆ ಬಾಡಿಗೆ ಮೊತ್ತ ಒಂದು ವಿಷಯವೇ ಅಲ್ಲ, ಮನೆಯ ಕಾಳಜಿ ತೆಗೆದುಕೊಳ್ಳುವವರು ಮುಖ್ಯ , ನೀವು ಮನೆಯನ್ನು ಹೊರಗಡೆಯಿಂದ ನೋಡಬಹುದು, ನಂತರ ನನಗೆ ಉತ್ತರಿಸಿ' ಎಂಬುದರ ಜೊತೆ ಒಂದು ಅರ್ಜಿ ಫಾರಂ ನ್ನೂ ಕಳುಹಿಸಿದ್ದರು. ನನಗಂತೂ ಆಶ್ಚರ್ಯ. ಬಾಡಿಗೆ ಮೊತ್ತವೂ ಜಾಸ್ತಿಯಿಲ್ಲ, ಸೋಫಾ, ಡೈನಿಂಗ್ ಟೇಬಲ್ ಎಲ್ಲ ಇರುವಂಥಹ ಸುಸಜ್ಜಿತ, ಸುಂದರ ಮನೆ ಯಾರಿಗೆ ಬೇಡ ಹೇಳಿ? ಇಷ್ಟು ದಿನ ಹುಡುಕಿದ್ದಕ್ಕೆ ಒಳ್ಳೆ ಜಾಕ್ ಪಾಟ್ ಹೊಡೆಯಿತು ಎಂದು ಉತ್ಸಾಹದಿಂದ ಫಾರಂ ಭಾರ್ತಿ ಮಾಡತೊಡಗಿದೆ. ಅದರಲ್ಲಿ ಮಾಮೂಲು ಮಾಹಿತಿಗಳ ಜೊತೆ ಕುಟುಂಬದ ಎಲ್ಲ ಸದಸ್ಯರ ಪೋಟೋ ಮತ್ತು ಯಜಮಾನನ ಪಾಸ್ಪೋರ್ಟ್ ಕಾಪಿ ಬೇಕು ಎಂಬುದನ್ನೂ ನೋಡಿದಾಗ ಇದು ಎಲ್ಲೋ ಮೋಸ ಇರಬಹುದು ಎಂಬ ಅನುಮಾನ ಬಂತು. ನಂತರ ಮಹೇಶ್ ಇಂಟರ್ನೆಟ್ ನಲ್ಲಿ ಇಂತಹ ಜಾಹೀರಾತುಗಳ ಬಗ್ಗೆ ಹುಡುಕಿದಾಗ ಗೊತ್ತಾಯಿತು ಇದೊಂದು ಮೋಸದ ಮಹಾ ಜಾಲ ಎಂದು. ತಿಂಗಳುಗಟ್ಟಲೆ ಖಾಲಿ ಇರುವ ಸ್ವತಂತ್ರ ಮನೆಗಳ ಬಗ್ಗೆ ಜಾಹೀರಾತು ಕೊಟ್ಟು ಅದಕ್ಕೆ ಮರುಳಾದ ಜನರಿಂದ ಡೆಪೋಸಿಟ್ ಹಣವನ್ನು ವಸೂಲಿ ಮಾಡುವ ತಂತ್ರ. ಕಾನೂನು ಎಷ್ಟು ಬಿಗಿಯಾಗಿದ್ದರೂ ಮೋಸ ಹೋಗುವ ಜನರು ಇರುವ ತನಕ ಇಂತಹ ಖದೀಮರಿಗೆ ಬರಗಾಲವಿಲ್ಲ.

ಈ ಅನುಭವ ಆದಮೇಲಂತೂ ಬಾಡಿಗೆ ಮೊತ್ತ ಕಡಿಮೆ ಇರುವ ಮನೆಗಳ ಜಾಹೀರತನ್ನೆಲ್ಲವನ್ನೂ ಸಂಶಯದಿಂದ ನೋಡುವಂತಾಗಿದೆ! ನಮ್ಮ ಅಪಾರ್ಟ್ಮೆಂಟ್ ಹಂಟಿಂಗ್ ಜಾರಿಯಲ್ಲಿದೆ. ಹೊಸ ಬಗೆಯ ಅನುಭವಗಳು, ವಿಭಿನ್ನ ವ್ಯಕ್ತಿತ್ವದ ಜನರ ಭೇಟಿ, ಅಮೇರಿಕವನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳುವ ಅವಕಾಶ . ಒಂದಂತೂ ನಿಜ, ಪ್ರತೀ ಹಂತದಲ್ಲೂ ನನ್ನ ಇಂಡಿಯಾ ಎಷ್ಟು ಗ್ರೇಟ್ ಎಂದು ಹೆಮ್ಮೆ ಪಟ್ಟುಕೊಳ್ಳುವಂತೆ ಮಾಡಿದೆ ನನ್ನ ಈ ಅನುಭವ. ಮತ್ತೊಮ್ಮೆ ನನ್ನ ಇಂಡಿಯಾಗೆ ಸಲಾಂ.