ಜೂನ್ ಮೊದಲನೇ ವೀಕೆಂಡ್ ನಲ್ಲಿ ಕ್ಯಾಲಿಫೋರ್ನಿಯಾ ಕ್ಕೆ ಬರುತ್ತೇನೆ , ಯೋಸೆಮಿಟೆ ನ್ಯಾಷನಲ್ ಪಾರ್ಕ್ ಗೆ ಹೋಗಿಬರೋಣ ಎಂದು ಬಾಲ್ಟಿಮೋರ್ ನಿಂದ ರಾಘಣ್ಣ ಮೇಲ್ ಮಾಡಿದಾಗ ಆದ ಸಂತೋಷ ಅಷ್ಟಿಷ್ಟಲ್ಲ. ಬಾಲ್ಯದಲ್ಲಿ ಸ್ವಂತ ಅಣ್ಣ ತಂಗಿಯರಂತೆ ಒಟ್ಟಿಗೆ ಬೆಳೆದಿದ್ದು , ನಂತರ ವಿದ್ಯಾಭ್ಯಾಸಕ್ಕಾಗಿ ಬೇರೆ ಬೇರೆ ಕಡೆ ಹೋದರೂ, ಸಂಪರ್ಕ, ಭೇಟಿ ಕಡಿಮೆಯಾಗಿದ್ದರೂ ಆತ್ಮೀಯತೆ ಮಾತ್ರ ಅಷ್ಟೇ ಇತ್ತು. ಹಾಗಾಗಿ ಅವನು ಬರುತ್ತಿದ್ದಾನೆಂಬ ಸಂಭ್ರಮದ ಜೊತೆ ನನ್ನ ಬಹುದಿನದ ಆಸೆಯಾದ ಯೋಸೆಮಿಟೆ ಪ್ರವಾಸ ಕೈಗೂಡುತ್ತಿದೆ ಎಂಬ ಸಂತೋಷ. ಅದೃಷ್ಟಕ್ಕೆ ಮಹೇಶ್ ಗೂ ಆಫೀಸ್ ನಿಂದ ರಜೆ ಸಿಕ್ಕಿದ್ದು, ರಾಘಣ್ಣನ ಇಬ್ಬರು ಸ್ನೇಹಿತರಿಗೂ ಬರಲು ಅವಕಾಶವಾಗಿದ್ದು, ಬಾಡಿಗೆ ಕಾರ್ ಮತ್ತು ಉಳಿದುಕೊಳ್ಳಲು ಹೋಟೆಲ್ ಗಳ ಒಳ್ಳೆ ಡೀಲ್ ಸಿಕ್ಕಿದ್ದು ಎಲ್ಲವೂ ಅನುಕೂಲಕರವಾಗಿ ಪರಿಣಮಿಸಿತ್ತು.
ಯೋಸೆಮಿಟೆ ಪೂರ್ವ - ಮಧ್ಯ ಕ್ಯಾಲಿಫೋರ್ನಿಯಾ ದಲ್ಲಿರುವ ಒಂದು ಬೃಹತ್ ರಾಷ್ಟ್ರೀಯ ಉದ್ಯಾನವನ. ಸುಮಾರು ೭ ಲಕ್ಷ ಎಕರೆ ವಿಸ್ತೀರ್ಣದ ಈ ಪ್ರದೇಶದಲ್ಲಿ ಸುಮಾರು ೧೮ ಚದರ ಕಿ. ಮೀ. ವ್ಯಾಪ್ತಿಯ ಯೋಸೆಮಿಟೆ ಕಣಿವೆ ಇಲ್ಲಿಯ ಪ್ರಮುಖ ಪ್ರವಾಸೀ ತಾಣಗಳಲ್ಲಿ ಒಂದು. ಈ ಪ್ರದೇಶದ ೯೫% ಭಾಗವನ್ನು ಪ್ರಯತ್ನಪೂರ್ವಕವಾಗಿ ನೈಸರ್ಗಿಕವಾಗಿಯೇ ಉಳಿಸಿಕೊಳ್ಳಲಾಗಿದೆ. (Wilderness). ಸಮುದ್ರ ಮಟ್ಟಕ್ಕಿಂತ ೪೦೦೦ ಮೀ ತನಕ ಇರುವ ಸಿಯೆರ್ರಾ ಪರ್ವತಗಳ ತಪ್ಪಲಲ್ಲಿರುವ ಮನಮೋಹಕ ಯೋಸೆಮಿತೆ ಕಡಿದಾದ ಗ್ರಾನೈಟ್ ಹೆಬ್ಬಂಡೆಗಳಿಗೆ, ಜಲಪಾತಗಳಿಗೆ, ಸುಂದರ ಸರೋವರಗಳಿಗೆ, ಬೃಹತ್ ಸೆಕೋಯ ಮರಗಳ ತೋಪುಗಳಿಗೆ ಹಾಗೂ ಜೀವವೈವಿಧ್ಯತೆ ಗೆ ಹೆಸರುವಾಸಿ. ಯೋಸೆಮಿಟೆ ಜಲಪಾತ ಉತ್ತರ ಅಮೇರಿಕಾದ ಅತ್ಯಂತ ಎತ್ತರದ ಜಲಪಾತ. (೪೨೦೦ ಅಡಿ). ನಿರಂತರವಾಗಿ ತನ್ನ ಮೇಲ್ಮೈ ಸ್ವರೂಪವನ್ನು ಬದಲಾಯಿಸುತ್ತಲೇ ಇರುವ ಭೂಮಿಯ ಅಸಾಧಾರಣ ಬದಲಾವಣೆಗಳಿಗೆ ಇಲ್ಲಿಯ ವೈಶಿಷ್ಟ್ಯಗಳು ಜೀವಂತ ಉದಾಹರಣೆ. ಈ ಸಿಯೆರ್ರಾ ನೆವಾಡ ಪರ್ವತಗಳು ೧೦ ಮಿಲಿಯನ್ ವರ್ಷಗಳ ಹಿಂದೆ ಭೂಖಂಡ ಗಳ ಒತ್ತುವಿಕೆಯಿಂದ ಎದ್ದು ನಿಂತದ್ದು. ೧ ಮಿಲಿಯನ್ ವರ್ಷಗಳ ಹಿಂದೆ ಆದ ಹಿಮ ಯುಗದಲ್ಲಿ ಸಂಗ್ರಹವಾದ ಮಂಜುಗಡ್ದೆ ಹಾಗೂ ಹಿಮನದಿಗಳು ಆಗಾಧ ಕೊರಕಲು - ಕಣಿವೆಗಳನ್ನು ರಚಿಸಿವೆ. ಅತ್ಯಂತ ಪ್ರಸಿದ್ಧವಾದ Half Dome ಕೂಡ ಇಂಥದ್ದೇ ನೈಸರ್ಗಿಕ ಪ್ರಕ್ರಿಯೆಗಳಿಂದ ಕಡೆಯಲ್ಪಟ್ಟಿದ್ದು. ಅದರ ತುದಿ ಪ್ರಪಂಚದ ಒಂದು ಅತೀ ಕಷ್ಟದ ಪರ್ವತಾರೋಹಣ.
ಅಲ್ಲಿರುವ ಪ್ರತಿಯೊಂದು ಆಕರ್ಷಣೆಯ ಹಿಂದೆ ಸ್ವಾರಸ್ಯಕರವಾದ ಭೌಗೋಳಿಕ ಚರಿತ್ರೆ ಇದೆ. ಆದರೆ ಅವೆಲ್ಲವುಗಳ ವಿವರಣೆ ನನ್ನ ಈ ಪುಟ್ಟ ಬ್ಲಾಗ್ ಪೋಸ್ಟ್ ನ ಮಿತಿಗೆ ಮೀರಿದ್ದು. ನಾನು ಈಗ ಹೇಳಲು ಹೊರಟಿದ್ದು, ನನಗೆ ಯೋಸೆಮಿಟೆ ಯಲ್ಲಿ ತುಂಬ ಇಷ್ಟವಾದ ಜಾಗಗಳಲ್ಲಿ ಒಂದಾದ ನೆವಾಡ ಜಲಪಾತ. ಅದರಲ್ಲೂ ಐದೂವರೆ + ಐದೂವರೆ ಕಿಲೋಮೀಟರು ಗಳ ಪುಟ್ಟ ಹೈಕಿಂಗ್. ಮೊದಲೇ ನಾವಿಬ್ಬರು ಅತ್ಯಂತ ಇಷ್ಟಪಡುವ ಚಟುವಟಿಕೆಗಳಲ್ಲಿ ಒಂದು ಈ ತರಹದ ಹೈಕಿಂಗ್ ಗಳು. ಮಿಸ್ಟ್ ಟ್ರೈಲ್ ನಿಂದ ಶುರುವಾದ ನಮ್ಮ ಹೈಕಿಂಗ್ ಕಲ್ಲುಬಂಡೆಗಳ ನಡುವೆ, ಹಸಿರು ಕಾಡಿನ ಮಧ್ಯೆ , ದಾರಿಯುದ್ದಕ್ಕೂ ಮೆರ್ಸೆಡ್ ನದಿ ನೀರಿನ ಝರಿಗಳ ಜುಳುಜುಳು ನಾದ, ಹಕ್ಕಿಗಳ ಕಲರವದೊಂದಿಗೆ ಇನ್ನೂ ಆಪ್ಯಾಯಮಾನವಾಗಿತ್ತು. ಅಲ್ಲಲ್ಲಿ ಕುಡಿಯುವ ನೀರು, ಶೌಚಾಲಯಗಳ ವ್ಯವಸ್ಥೆ ಪ್ರವಾಸಿಗರಿಗೆ ಬಹಳ ಅನುಕೂಲಕರವಾಗಿತ್ತು. ನಿಧಾನಕ್ಕೆ ಮೇಲೆಮೇಲೆ ಹತ್ತುತ್ತ ಬರುತ್ತಿದ್ದಂತೆ ಜಲಪಾತದ ಭೋರ್ಗರೆಯುವ ಸದ್ದು ಕೇಳತೊಡಗಿತು.
ಮಧ್ಯೆ ವರ್ನಲ್ ಜಲಪಾತದವರೆಗೂ ಸುಲಭವಾಗಿದ್ದ ಹೈಕಿಂಗ್ ನಿಧಾನ ಸ್ವಲ್ಪ ಕಡಿದಾಗುತ್ತಾ ಬಂತು. ಆ ನಂತರದ ಹಾದಿ ತುಂಬ ಕಿರಿದಾದದ್ದು. ಬೃಹತ್ ಬಂಡೆಗಳ ಮೇಲೇ ಮೆಟ್ಟಿಲುಗಳನ್ನು ಕಡೆದು, ಪಕ್ಕಕ್ಕೆ ಆಧಾರದ ಬೇಲಿಗಳನ್ನೂ ಹಾಕಿ ಸುರಕ್ಷಿತವಾಗಿಸಿದ್ದರು. ನಾನು ಬೆರಗಾಗಿದ್ದು ಅಲ್ಲಿಯ ಪ್ರವಾಸಿಗರನ್ನು ನೋಡಿ. ಅಷ್ಟೇನೂ ಸುಲಭವಲ್ಲದ ಈ ಮಾರ್ಗದಲ್ಲಿ , ೫೦ ವರ್ಷಕ್ಕೂ ಮೇಲ್ಪಟ್ಟವರು ಗಣನೀಯ ಸಂಖ್ಯೆಯಲ್ಲಿರುವುದು! ಅಷ್ಟೇ ಅಲ್ಲ, ೫ ವರ್ಷಕ್ಕಿಂತ ಕೆಳಗಿನ ಮಕ್ಕಳೂ ಸಹ! ಸಾಹಸೀ ಪ್ರವೃತ್ತಿ ಇವರ ವ್ಯಕ್ತಿತ್ವದ ಅವಿಭಾಜ್ಯ ಗುಣ. ಆಗ ಅನ್ನಿಸಿತು, ನಾವು ನಮ್ಮ ಮಕ್ಕಳ ಸಹಜ ಚೈತನ್ಯ - ಹುಮ್ಮಸ್ಸನ್ನು ಹರಿಯಬಿಡುವುದು ಕಡಿಮೆ. ೫ ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ , ನಾವು ಈ ತರಹದ ಚಟುವಟಿಕೆ ಗಳಿಗೆ ಎಷ್ಟು ಪ್ರೋತ್ಸಾಹ ಕೊಡುತ್ತೇವೆ ಹೇಳಿ? ಸಿಟಿಯಲ್ಲಿ ಬೆಳೆದ ಎಷ್ಟೋ ಮಕ್ಕಳು ಹಳ್ಳಿಯ ಅಜ್ಜನ ಮನೆಗೆ ಬಂದಾಗ ತೋಟಕ್ಕೂ ಸಹ ಕರೆದುಕೊಂಡು ಹೋಗದ ಪೋಷಕರಿದ್ದಾರೆ . ಇನ್ನು ಅವರಷ್ಟಕ್ಕೆ ಗುಡ್ಡ - ಬೆಟ್ಟಗಳನ್ನು ಹತ್ತಲು ಬಿಡುವುದು ದೂರದ ಮಾತು. ನಾನಂತೂ ೧ ವರ್ಷದ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು (ಅಕ್ಷರಶಃ ಬೆನ್ನಿಗೆ ಕಟ್ಟಿಕೊಂಡು!) ಹತ್ತುತ್ತಿರುವ ಮಹಿಳೆಯರನ್ನೂ ನೋಡಿದೆ. ಯಾವ ಕಾರಣಗಳೂ ಸಹ ಇವರ ಅದಮ್ಯ ಹುಮ್ಮಸ್ಸಿನ ಜೀವನ ಶೈಲಿಗೆ ಅಡ್ಡಿಯಾಗುವುದಿಲ್ಲ ಎಂಬ ಅಚ್ಚರಿಭರಿತ ಮೆಚ್ಚುಗೆ ವ್ಯಕ್ತಪಡಿಸುತ್ತಾ ಮುಂದುವರೆದೆವು.
ಜಲಪಾತದ ನೀರಿನ ಸಿಂಚನ ನಮ್ಮ ಆಯಾಸವನ್ನು ಪರಿಹರಿಸಿತ್ತು. ಜಲಪಾತದ ನೆತ್ತಿಯನ್ನು ತಲುಪಿದಾಗ ಆಗಲೇ ಸುಮಾರು ತೊಯ್ದು ಹೋಗಿದ್ದೆವು. ಮನಸೂರೆಗೊಳ್ಳುವ ಪರ್ವತ - ಕಣಿವೆ ಗಳ ಹಿನ್ನೆಲೆಯಲ್ಲಿ ಎಲ್ಲಿಂದಲೋ ಹರಿದುಬರುವ ಪ್ರಶಾಂತ ಮರ್ಸಿಡ್ ನದಿ ಆರ್ಭಟಿಸುವ ಜಲಪಾತಕ್ಕೆ ರೂಪಾಂತರ ಹೊಂದುವ ದೃಶ್ಯ ಎಲ್ಲವನ್ನೂ ಮರೆಸಿತ್ತು. ಈ ಜಲಪಾತ ಉದ್ದಕ್ಕೂ ಒಂದೇ ಹಂತಕ್ಕೆ ಧುಮುಕುವ ಜಲರಾಶಿಯಂತೆ ಅಲ್ಲ. ಮೂರನೇ ಒಂದು ಭಾಗ ಮಾತ್ರ ಆ ತರಹದ ಫ್ರೀ ಫಾಲ್ . ನಂತರ ದೊಡ್ಡ ಇಳಿಜಾರು ಕಲ್ಲು ಬಂಡೆಯ ಮೇಲೆ ಬಿದ್ದು ಹರಿಯುವ ನೀರಿನಿಂದಾಗಿ ಜಲಪಾತ ಬಾಗಿದಂತಿದೆ. ರಭಸದಿಂದ ಬಂಡೆಯ ಮೇಲೆ ಬೀಳುವ ನೀರು ತನ್ನ ಸುತ್ತಲೂ ದೊಡ್ಡ ಮಂಜಿನ ಮೋಡವನ್ನೇ ಸೃಷ್ಟಿಸುತ್ತದೆ. ಜಲಪಾತದ ಅನ್ವರ್ಥನಾಮಕ್ಕೆ ಇದೇ ಕಾರಣ. ಸ್ಪ್ಯಾನಿಶ್ ಭಾಷೆಯಲ್ಲಿ ನೆವಾಡ ಎಂದರೆ ಹಿಮಾವೃತ ಎಂದರ್ಥ.
ಆಗಾಗಲೇ ಸಂಜೆಯಗುತ್ತ ಬಂದಿದ್ದರಿಂದ ನಾವು ಹೆಚ್ಚು ಹೊತ್ತುಅಲ್ಲಿ ಕಳೆಯಲಾಗಲಿಲ್ಲ. ಒಂದಷ್ಟು ಫೋಟೋ ಕ್ಲಿಕ್ಕಿಸಿ, ಮತ್ತೊಮ್ಮೆ ಇಲ್ಲಿಗೆ ಬರಲೇಬೇಕೆಂಬ ನಿಶ್ಚಯದೊಂದಿಗೆ ಮರಳಿ ಹೊರಟೆವು. ೬ ತಾಸುಗಳ ಪ್ರಯಾಣ ನಮ್ಮ ಮುಂದಿತ್ತಾದರೂ, ಮಾತನಾಡಲು, ಹಂಚಿಕೊಳ್ಳಲು ಬೇಕಾದಷ್ಟು ಅನುಭವ, ಅನಿಸಿಕೆ ಮತ್ತು ನೆನಪುಗಳಿತ್ತು. ಮುಂದಿನ ೨ ದಿನಗಳಲ್ಲಿ ಮತ್ತಷ್ಟು ಸ್ಮರಣೀಯ ಕ್ಷಣಗಳನ್ನು ನಿರೀಕ್ಷೆ ಮಾಡುತ್ತಾ ಮನೆಗೆ ಬಂದೆವು.
Subscribe to:
Post Comments (Atom)
1 comment:
Cool Blog ! U rock !
Post a Comment